ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮತ್ತು ಶ್ರೀರಾಮಸೇನೆಯಿಂದ ಆಯೋಜನೆ ಮಾಡಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಬುಧವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಸಂಘ ಪರಿವಾರದ ಮುಖಂಡರು ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧಾರಣೆ ಮಾಡಿದರು. ದತ್ತಮಾಲೆ ಧಾರಣೆ ಮೂಲಕ ದತ್ತಜಯಂತಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮತ್ತು ಶ್ರೀರಾಮಸೇನೆಯಿಂದ ಆಯೋಜನೆ ಮಾಡಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಬುಧವಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಸಂಘ ಪರಿವಾರದ ಮುಖಂಡರು ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧಾರಣೆ ಮಾಡಿದರು. ದತ್ತಮಾಲೆ ಧಾರಣೆ ಮೂಲಕ ದತ್ತಜಯಂತಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.

ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ಗಣಹೋಮ ಹಾಗೂ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಿ.ಟಿ.ರವಿ, ಪ್ರಮೋದ್ ಮುತಾಲಿಕ್, ಪ್ರಮುಖರಾದ ರಘು ಸಕಲೇಶಪುರ, ರಂಗನಾಥ್, ಅಮಿತ್‌ಗೌಡ, ಶ್ಯಾಮ್ ವಿ.ಗೌಡ ಹಾಗೂ ಕಾರ್ಯಕರ್ತರು ಮಾಲಾಧಾರಣೆ ಮಾಡಿದರು.

ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಮಾತ್ರವಲ್ಲದೆ ಶೃಂಗೇರಿ, ಕೊಪ್ಪ ಸೇರಿದಂತೆ ಜಿಲ್ಲೆಯಾದ್ಯಂತ ದತ್ತ ಭಕ್ತರು ದತ್ತಮಾಲಾಧಾರಣೆ ಮಾಡಿದರು. ದತ್ತ ಜಯಂತಿಯ ಹಿನ್ನೆಲೆಯಲ್ಲಿ ಬುಧವಾರ ದತ್ತಮಾಲಾ ಧಾರಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಡಿ.2ರಂದು ಚಿಕ್ಕಮಗಳೂರಿನಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ.

ಸತ್ಯಶೋಧನಾ ಸಮಿತಿ ರಚಿಸಿ:

ದತ್ತಪೀಠವೇ ಬೇರೆ. ಬಾಬಾ ಬುಡಬ್ ದರ್ಗಾ ಬೇರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸತ್ಯಾಸತ್ಯತೆ ಪರಿಶೀಲಿಸಲು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಿ ಪರಿಶೀಲನೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.

ದತ್ತಮಾಲಾ ಧಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸತ್ಯಶೋಧನಾ ಸಮಿತಿ ಎಲ್ಲೆಡೆ ಪರೀಶಿಲನೆ ನಡೆಸಬೇಕು. ಅದನ್ನು ಬಿಟ್ಟು ಸರ್ಕಾರ ಅಸತ್ಯದ ಪರವಾಗಿ ನಿಂತಿದ್ದೆಯಾದಲ್ಲಿ ಅದು ಸಂವಿಧಾನಕ್ಕೆ ಬಗೆಯುವ ದ್ರೋಹವಾಗಲಿದೆ ಎಂದರು.

ಹಿಂದು ನಾಯಕರು, ಸಂಘಟನೆಗಳು ಒಂದಾಗಲಿ

ನಮ್ಮ ಸ್ವಾರ್ಥ, ದ್ವೇಷ ಬಿಟ್ಟು ನಾವೆಲ್ಲರೂ ಒಂದಾಗಬೇಕಾಗಿದೆ. ದುಷ್ಟ ಶಕ್ತಿಗಳು ಎಲ್ಲೆಡೆ ವ್ಯಾಪಿಸುತ್ತಿವೆ. ಇಂಥ ಸಂದರ್ಭದಲ್ಲಿ ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಎಲ್ಲ ಹಿಂದು ನಾಯಕರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಬೇಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ದತ್ತಮಾಲಾಧಾರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಲು ಬರೋಬ್ಬರಿ 500 ವರ್ಷ ಬೇಕಾಯಿತು. ನ್ಯಾಯಾಲಯದ ವಿಳಂಬ ಹಾಗೂ ರಾಜಕಾರಣಿಗಳು ಮೂಗು ತೂರಿಸುವುದರಿಂದ ದತ್ತಪೀಠ ವಿಷಯವೂ ವಿಳಂಭವಾಗುತ್ತಿದೆ. ದತ್ತಪೀಠದ ಆವರಣದಲ್ಲಿರುವ ನಕಲಿ ಗೋರಿಗಳನ್ನು ಸ್ಥಳಾಂತರಿಸಿ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.