ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಇಡೀ ಮನುಕುಲ, ಪ್ರಾಣಿ, ಪಕ್ಷಿ ಸೃಷ್ಟಿ ಮಾಡಿದವನು ಭಗವಂತ. ಭಗವಂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಜೀವ ತುಂಬುವುದಂತಲ್ಲ. ಆ ವಿಗ್ರಹಕ್ಕೆ ನಿಮ್ಮ ಭಕ್ತಿ ತುಂಬುವುದಾಗಿದೆ ಎಂದು ಸಿರಿಗೆರೆ ತರಳುಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಭೂತಪ್ಪ ಸ್ವಾಮಿ, ದುರ್ಗಾಮ್ಮ ದೇವಿ, ಮರಿಯಮ್ಮ ದೇವಿ, ಮಾತಂಗೇಶ್ವರಿ ದೇವಿ ದೇಗುಲ ಪ್ರವೇಶ ಮತ್ತು ಸದರಿ ದೇವರ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ, ಕರಿಯಮ್ಮ ದೇವಿ ದೇಗುಲದ ಕಳಸಾರೋಹಣ ನಿಮಿತ್ತ ಆಯೋಜಿಸಲಾಗಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ನಮ್ಮ ಪರಂಪರೆಯಿಂದ ನಡೆದುಕೊಂಡು ಬಂದಿದ್ದು, ದೇವರ ಪ್ರಾಣ ಪ್ರತಿಷ್ಠಾಪನೆ ಎಂದರೆ ಆ ವಿಗ್ರಹಕ್ಕೆ ನಿಮ್ಮ ಭಕ್ತಿಯ ಪ್ರತಿಷ್ಠಾಪನೆ ಮಾಡುವುದಾಗಿದೆ ಎಂದು ಹೇಳಿದರು.ರಾಂಪುರ ಶ್ರೀ ಹಾಲಸ್ವಾಮೀಜಿ ಮಠದ ಶಿವಕುಮಾರ ಹಾಲಸ್ವಾಮೀಜಿ ಮಾತನಾಡಿ, ಗಡಿ ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ಸೈನಿಕರ ಹಾಗೂ ರೈತರ ನಿಸ್ವಾರ್ಥ ದುಡಿಮೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಷಡಾಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಿದ್ಯೆ ಮತ್ತು ಜ್ಞಾನದ ಬಲದಿಂದ ಬದುಕು ಕಟ್ಟಿಕೊಳ್ಳಬಹುದು. ನಾವು ವಾಸಿಸುವ ಸ್ಥಳದಲ್ಲಿ ಗುರು ಹಿರಿಯರಲ್ಲಿ ಗೌರವವಿಟ್ಟು, ಪರಸ್ಪರ ಪ್ರೀತಿ ವಿಶ್ವಾಸ, ಶಾಂತಿ, ಸೌಹಾರ್ಧ, ಸಾಮರಸ್ಯದಿಂದ ಬದುಕು ನಡೆಸಿದರೆ ನಾವು ನಂಬಿದಂತಹ ದೇವರನ್ನು ಕಾಣಬಹುದು ಹಾಗೇ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಹನುಮಂತದೇವರ ದೇಗುಲ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಎಂ.ಜಿ.ಬಸವರಾಜಪ್ಪ ಮಾತನಾಡಿದರು. ಸಮಾರಂಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ವಿಶ್ವನಾಥ್, ಸಾದು ವೀರಶೈವ ಸಮಾಜದ ನ್ಯಾಮತಿ ತಾಲೂಕು ಘಟಕದ ಅಧ್ಯಕ್ಷ ಕೋಡಿಕೊಪ್ಪ ಜಿ. ಶಿವಣ್ಣ, ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ಎಚ್.ಎ.ಗದ್ದಿಗೇಶ್, ಹಿಂದೂ ಕ್ಷತ್ರಿಯ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ಎಂ.ರವಿಕುಮಾರ್, ಇಂಜಿನಿಯರ್ ದಾನಿಹಳ್ಳಿ ಡಿ.ಜಿ.ಸೋಮಶೇಖರ್, ಶಿಲ್ಪಿಗಳಾದ ಮಾಸಡಿ ಗಣೇಶ್ ಆಚಾರ್, ದಾವಣಗೆರೆ ಟಿ.ಶಿವಶಂಕರ್, ಎಂ.ಸಿ.ಲೋಕೇಶ್, ಡಿ.ಎಸ್.ಪ್ರದೀಪ್‍ಗೌಡ, ಶ್ರೀ ಹನುಮಂತದೇವರ ದೇಗುಲ ಜೀರ್ಣೋದ್ಧಾರ ಸೇವಾ ಸಮಿತಿ ಜಿ.ಎಚ್.ಪರಮೇಶ್ವರಪ್ಪ ಸೇರಿ ವಿವಿಧ ದೇಗುಲಗಳ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು