ನಾಳೆ ಗಾಣಿಗ ಪೀಠದ ಪ್ರಥಮ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ

| Published : Jan 11 2025, 12:47 AM IST

ನಾಳೆ ಗಾಣಿಗ ಪೀಠದ ಪ್ರಥಮ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗಾಣಿಗ ಸಮಾಜದ ಪ್ರಥಮ ಜಗದ್ಗರುಗಳು ಹಾಗೂ ವನಶ್ರೀ ಸಂಸ್ಥಾನ ಮಠದ ಸಂಸ್ಥಾಪಕರಾದ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ ಹಾಗೂ ಪೂಜ್ಯರ 8ನೇ ಪುಣ್ಯತಿಥಿ ಸಮಾರಂಭವನ್ನು ಜ.12 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಅಖಿಲ ಭಾರತ ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗಾಣಿಗ ಸಮಾಜದ ಪ್ರಥಮ ಜಗದ್ಗರುಗಳು ಹಾಗೂ ವನಶ್ರೀ ಸಂಸ್ಥಾನ ಮಠದ ಸಂಸ್ಥಾಪಕರಾದ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ ಹಾಗೂ ಪೂಜ್ಯರ 8ನೇ ಪುಣ್ಯತಿಥಿ ಸಮಾರಂಭವನ್ನು ಜ.12 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಅಖಿಲ ಭಾರತ ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ನಗರದ ವನಶ್ರೀ ಸಂಸ್ಥಾನ ಮಠದ ಆವರಣದಲ್ಲಿ ಕಾರ್ಯಕ್ರಮದ ಪೋಸ್ಟರ್‌ ಅನಾವರಣಗೊಳಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತಿ ಬಳಿ ಇರುವ ವನಶ್ರೀ ಸಂಸ್ಥಾನಮಠದ ಆವರಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕೂ ಮೊದಲು ಬೆಳಗ್ಗೆ 9ಕ್ಕೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ 1111 ಮಹಿಳೆಯರ ಕುಂಭಮೇಳ ಆರಂಭವಾಗಿ ವನಶ್ರೀ ಸಂಸ್ಥಾನಮಠಕ್ಕೆ ಬರಲಿದೆ ಎಂದರು.ನಗರದ ಜಿಲ್ಲಾ ಪಂಚಾಯತಿ ಬಳಿ ಶ್ರೀ ಜಯದೇವ ಜಗದ್ಗುರು ವೃತ್ತದ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಂಚಿನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಗುರುಭವನದ ಅಡಿಗಲ್ಲು ಸಮಾರಂಭವನ್ನು ಸಚಿವರಾದ ಎಂ.ಬಿ.ಪಾಟೀಲ ಹಾಗೂ ಶಿವಾನಂದ ಪಾಟೀಲ ನೆರವೇರಿಸಲಿದ್ದಾರೆ. ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ವನಶ್ರೀ ಸಂಸ್ಥಾನಮಠದ ಡಾ.ಜಯಬಸವಕುಮಾರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ, ಚಿತ್ತರಗಿ ಗುರುಮಹಾಂತ ಸ್ವಾಮಿಗಳು, ಯರಹೊಸಳ್ಳಿಯ ವೇಮನಾನಂದ ಮಹಾಸ್ವಾಮಿಗಳು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಕಣಾಪುರದ ಸೊಮೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಪೂಜರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ ಅಧ್ಯಕ್ಷ ಜಮಖಂಡಿಯ ಸಿದ್ದಮುತ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಸುಮಾರು 10ಸಾವಿರಕ್ಕೂ ಅಧಿಕ ಭಕ್ತರು, ಸಮಾಜದ ಜನರು ಆಗಮಿಸಲಿದ್ದಾರೆ. ಜಯದೇವ ಅಪ್ಪನವರು ಸರ್ಕಾರದಿಂದ ಹಾಗೂ ಜನರಿಂದ ಒಂದೇ ಒಂದು ರುಪಾಯಿ ಹಣ ಪಡೆಯದೇ ತಮ್ಮ ಸ್ವಂತ ಜಮೀನು ಮಾರಿ ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಈ ಎಲ್ಲ ಆಸ್ತಿಯನ್ನು ಗಾಣಿಗ ಟ್ರಸ್ಟ್‌ಗೆ ಬರೆಯುವ ಮೂಲಕ ಜೋಳಿಗೆ ಇಲ್ಲದ ಜಂಗಮರಾಗಿದ್ದಾರೆ ಎಂದರು.ವನಶ್ರೀ ಸಂಸ್ಥಾನಮಠದ ಡಾ.ಜಯಬಸವಕುಮಾರ ಸ್ವಾಮೀಜಿ ಮಾತನಾಡಿ, ಭಕ್ತರೆಲ್ಲ ಸೇರಿ ಸ್ವಾಮೀಜಿಯ ಮೇಲಿನ ಪ್ರೀತಿ, ಭಕ್ತಿಯಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಜಯದೇವ ಜಗದ್ಗುರುಗಳಿಂದ ವನಶ್ರೀ ಸಂಸ್ಥಾನ ಮಠ ನಿರ್ಮಾಣವಾಗಿದೆ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಗಣ್ಯರು, ಭಕ್ತರು, ಸಮಾಜದ ಹಿರಿಯರು ಭಾಗವಹಿಸಲಿದ್ದಾರೆ. ಅಂದು ಪ್ರಣವ ಮಂಟಪ ಲೋಕಾರ್ಪಣೆ, ಜಯದೇವ ಜಗದ್ಗುರು ಸರ್ಕಲ್ ಅನಾವರಣ, ಗುರುಭವನದ ಅಡಿಗಲ್ಲು ಸಮಾರಂಭ ನಡೆಯಲಿವೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಮುಖಂಡರಾದ ಬಿ.ಜಿ.ಪಾಟೀಲ, ಎನ್.ಎಸ್.ಲೋಣಿ, ಎಸ್.ಎಸ್.ಶಿರಾಡೋಣ, ಬಿ.ಬಿ.ಪಾಸೋಡಿ, ಬಿ.ಎಂ.ಪಾಟೀಲ ಕತ್ನಳ್ಳಿ, ಡಾ.ಬಾಬು ಸಜ್ಜನ ಸೇರಿದಂತೆ ಹಲವರು ಉಪಸ್ಥಿತರಿದ್ದರು.