ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಹಕ್ಕುಗಳಿಗೆ ಆಗ್ರಹಿಸಿ 18 ಬೇಡಿಕೆ ಈಡೇರಿಕೆಗಾಗಿ ಪ್ರಣವಾನಂದ ಸ್ವಾಮೀಜಿ ಜ.6ರಿಂದ ಫೆ.12 ರವರೆಗೆ 41ದಿನಗಳ ವರೆಗೆ ನಡೆಸುವ ಇತಿಹಾಸಿಕ ಪಾದಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರದಾಳದಲ್ಲಿ ಉದ್ಘಾಟಿಸಲಿದ್ದಾರೆಂದು ಚಿತ್ತಾಪುರದ ಕರದಾಳ ಶಕ್ತಿ ಪೀಠದ ಮಾಧ್ಯಮ ಸಂಚಾಲಕ ಡಾ.ಸದಾನಂದ ಪೆರ್ಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಈಡಿಗ, ಬಿಲ್ಲವ ಸೇರಿದಂತೆ 26 ಪಂಗಡಗಳ ಹಕ್ಕುಗಳಿಗೆ ಆಗ್ರಹಿಸಿ 18 ಬೇಡಿಕೆ ಈಡೇರಿಕೆಗಾಗಿ ಪ್ರಣವಾನಂದ ಸ್ವಾಮೀಜಿ ಜ.6ರಿಂದ ಫೆ.12 ರವರೆಗೆ 41ದಿನಗಳ ವರೆಗೆ ನಡೆಸುವ ಇತಿಹಾಸಿಕ ಪಾದಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರದಾಳದಲ್ಲಿ ಉದ್ಘಾಟಿಸಲಿದ್ದಾರೆಂದು ಚಿತ್ತಾಪುರದ ಕರದಾಳ ಶಕ್ತಿ ಪೀಠದ ಮಾಧ್ಯಮ ಸಂಚಾಲಕ ಡಾ.ಸದಾನಂದ ಪೆರ್ಲ ತಿಳಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈಡಿಗ ಸೇರಿದಂತೆ 26 ಪಂಗಡಗಳ ಸಮಗ್ರ ಕಲ್ಯಾಣಕ್ಕೆ ಸರ್ಕಾರಗಳು ಮೀನ ಮೇಷ ಎಣಿಸುತ್ತಿದ್ದು ಸರಕಾರದ ಗಮನ ಸೆಳೆಯಲು 18 ಬೇಡಿಕೆಗಳನ್ನು ಒತ್ತಾಯಿಸಿ ನಡೆಸುವ ಪಾದಯಾತ್ರೆಯ ಬಹಿರಂಗ ಸಭೆ ಚಿತಾಪುರದ ಬಜಾಜ್ ಕಲ್ಯಾಣ ಮಂಟಪದಲ್ಲಿ ಜ. 6ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಕರದಾಳ ಮಠದಲ್ಲಿ ಅತಿ ಹಿಂದುಳಿದ ಮಠಗಳ ಆರು ಮಠಾಧೀಶರು ಬೆಳಗ್ಗೆ 9.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆಂದರು.

ಪಾದಯಾತ್ರೆಯು ಸುಮಾರು 9 ಕಿಲೋಮೀಟರ್ ಕ್ರಮಿಸಿ ಚಿತಾಪುರ ಪಟ್ಟಣಕ್ಕೆ ಆಗಮಿಸಿದ ನಂತರ ಬಹಿರಂಗ ಸಭೆ ನಡೆಯಲಿದೆ. ತೆಲಂಗಾಣದ ಮಾಜಿ ಸಚಿವರು ಇತರರು ಭಾಗವಹಿಸಲಿದ್ದಾರೆ. ಈ ಪಾದಯಾತ್ರೆ ಪ್ರತಿದಿನ 20 ಕೀ. ಮೀ.ಸಂಚರಿಸಲಿದೆ. ಚಿತ್ತಾಪುರದಿಂದ ಜ.7ರಂದು ಹೊರಟು ರಾವೂರ, ವಾಡಿ, ಶಹಾಬಾದ್ (ವಾಸ್ತವ್ಯ) ಮಾಡಲಿದೆ. ಜ 8ರಂದು ಜೇವರ್ಗಿ(ವಾಸ್ತವ್ಯ)9ರಂದು ಆಂದೋಲ,ಚಿಕ್ಕಮೂಡಬಾಳ(ವಾಸ್ತವ್ಯ) 10ರಂದು ಅಳ್ಳಳ್ಳಿ, ಶಹಾಪುರ(ವಾಸ್ತವ್ಯ)11ರಂದು ರಸ್ತಾಪುರ, ಕ್ರಾಸ್ ಬಿರನೂರ (ವಾಸ್ತವ್ಯ) 12ರಂದು ಹೂವಿನ ಹಡಿಗೆ, ಶಿರವಾರ ಕ್ರಾಸ್ (ವಾಸ್ತವ್ಯ) ಮೂಲಕ ಸಾಗಲಿದೆ.

ನಿಗಮಕ್ಕೆ 500 ಕೋಟಿ ರು. ಬಿಡುಗಡೆ, ಕುಲಕಸಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಂತ್ರಸ್ತರಿಗೆ ಪ್ಯಾಕೇಜ್ ಘೋಷಣೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡುವುದು, ಅಬಕಾರಿ ಹರಾಜಿನಲ್ಲಿ ಕುಲಕಸುಬು ಕಳೆದುಕೊಂಡ ಈಡಿಗ ಸೇರಿ 26 ಸಮುದಾಯದವರಿಗಾಗಿ ಮೀಸಲಾತಿ ಘೋಷಣೆ ಮುಂತಾದ ಬೇಡಿಕೆಗಳಿವೆ.

15 ಬಹಿರಂಗ ಸಭೆ:

40 ದಿನಗಳ ಪಾದಯಾತ್ರೆಯಲ್ಲಿ ಒಟ್ಟು 15 ಬಹಿರಂಗ ಸಭೆಗಳು ನಡೆಯಲಿದೆ. ಜೇವರ್ಗಿ ಶಹಪುರ ಪಟ್ಟಣ ಶಿರಭಾರ ಮಾನ್ವಿ ಜವಳಗೆರೆ ಗಂಗಾವತಿ ಹೊಸಪೇಟೆ ಚಿತ್ರದುರ್ಗ ತುಮಕೂರು ಯಶವಂತಪುರ ಇಲ್ಲೆಲ್ಲಾ ಮಾಜಿ ಸಚಿವರಾದ ಸುನಿಲ್ ಕುಮಾರ್, ಸಿ ಟಿ ರವಿ,ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಪಾಲ್ಗೊಳ್ಳಲಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಆಕರ್ಷಕ ರಥ ಸಿದ್ಧ:

ಪಾದಯಾತ್ರೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯ ಅಲಂಕೃತ ರಥ, ಡಿಜಿಟಲ್ ವಾಹನದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆಯ ಬ್ರಹ್ಮಶ್ರೀ ನಾರಾಯಣ ಗುರು ಸಿನಿಮಾ ಪ್ರದರ್ಶನ ಇರುತ್ತದೆ. ಆರ್ಯ ಈಡಿಗ ಸಂಘ, ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ, ಬಿಲ್ಲವ ಸಂಘಟನೆ, ಧೀವರ, ನಾಮಧಾರಿ ಸೇರಿದಂತೆ ಹಲವು ಸಂಘಟನೆಗಳು, ಕಾಮಧೇನು ಮಹಿಳಾಸಂಘ ಕೈಜೋಡಿಸಿವೆ.