ಗವಿಸಿದ್ಧೇಶ್ವರ ಜಾತ್ರೆಯ ಪ್ರಸಾದದ ಕೊನೆ ದಿನ ಸಹ ಭಾನುವಾರ ಆಗಿದ್ದು, ಗವಿಮಠಕ್ಕೆ ಭಕ್ತರು ತಂಡೋಪತಂಡವಾಗಿ ಆಗಮಿಸಿದರು

ಕೊಪ್ಪಳ: ನಗರದ ಗವಿಸಿದ್ಧೇಶ್ವರ ಮಹಾದಾಸೋಹದ ಕೊನೆ ದಿನವಾದ ಭಾನುವಾರ 2 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.

ಜಾತ್ರೆ ಆರಂಭದಿಂದ ಅಪಾರ ಭಕ್ತರು ನಿತ್ಯ ಪ್ರಸಾದ ಸ್ವೀಕಾರ ಮಾಡುತ್ತಾ ಬಂದಿದ್ದಾರೆ. ದಾಸೋಹದ ಕೊನೆ ದಿನ ಅಮಾವಾಸ್ಯೆ ಪ್ರಯುಕ್ತ ಗವಿಮಠಕ್ಕೆ ಅಪಾರ ಭಕ್ತರು ಆಗಮಿಸಿದ್ದರು. ಗವಿಸಿದ್ಧೇಶ್ವರ ಗದ್ದುಗೆ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಗವಿಸಿದ್ಧೇಶ್ವರ ಜಾತ್ರೆಯ ಪ್ರಸಾದದ ಕೊನೆ ದಿನ ಸಹ ಭಾನುವಾರ ಆಗಿದ್ದು, ಗವಿಮಠಕ್ಕೆ ಭಕ್ತರು ತಂಡೋಪತಂಡವಾಗಿ ಆಗಮಿಸಿದರು. ಭಾನುವಾರ ಬರೋಬ್ಬರಿ ನೂರು ಕ್ವಿಂಟಲ್‌ ಗೋದಿ ಹುಗ್ಗಿ ಪ್ರಸಾದ ಮಾಡಲಾಗಿತ್ತು. ಇದಕ್ಕಾಗಿ 70 ಕ್ವಿಂಟಲ್‌ಗೂ ಅಧಿಕ ಬೆಲ್ಲ, 40 ಕ್ವಿಂಟಲ್ ಗೋದಿ, ಕೊಬ್ಬರಿ, ತುಪ್ಪ, ಗೋಡಂಬಿ, ದ್ರಾಕ್ಷಿ ಬಳಕೆ ಮಾಡಲಾಗಿತ್ತು. ಬರೋಬ್ಬರಿ 11 ಕೊಪ್ಪರಿಕೆಯಲ್ಲಿ ಗೋದಿ ಹುಗ್ಗಿ ತಯಾರಿಸಲಾಗಿತ್ತು. ಗೋದಿ ಹುಗ್ಗಿ, ಬದನೆಕಾಯಿ ಪಲ್ಲೆ ಹಾಗೂ ಅನ್ನ, ಸಾಂಬಾರನ್ನು ಭಕ್ತರು ಸ್ವೀಕರಿಸಿದರು. ಗೋದಿ ಹುಗ್ಗಿ ತಯಾರಿಗಾಗಿ ಶನಿವಾರದಿಂದಲೇ ರೋಡ್ ರೋಲರ್ ಮೂಲಕ ಬೆಲ್ಲ ರುಬ್ಬಿ, ರಾತ್ರಿಯಿಂದಲೇ ಪ್ರಸಾದ ತಯಾರು ಮಾಡಲಾಗಿತ್ತು. ಮಹಾದಾಸೋಹದಲ್ಲಿ ಜನ ಕಿಕ್ಕಿರಿದು ತುಂಬಿತ್ತು, ಅಪಾರ ಭಕ್ತರು ಆಗಮಿಸಿದ್ದರು. ಎರಡು ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದರು ಎಂದು ಅಂದಾಜಿಸಲಾಗಿತ್ತು.

ನೂರಕ್ಕೂ ಅಧಿಕ ಕ್ವಿಂಟಲ್ ಅಕ್ಕಿ ಬಳಕೆ:ಮಹಾ ದಾಸೋಹದ ಕೊನೆ ದಿನ ನೂರು ಕ್ವಿಂಟಲ್‌ಗೂ ಅಧಿಕ ಅಕ್ಕಿ ಬಳಕೆ ಮಾಡಲಾಗಿದೆ. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ವೇಳೆಗೆ ಆಗಲೇ ನೂರು ಕ್ವಿಂಟಲ್ ಅಕ್ಕಿ ಬಳಕೆ ಮಾಡಲಾಗಿತ್ತು. ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹ ಅಂದರೆ ಒಂದಿಲ್ಲ ಒಂದು ವಿಶೇಷತೆ ಇದ್ದೆ ಇರುತ್ತದೆ. ಆ ನಿಟ್ಟಿನಲ್ಲಿ ಅಮಾವಾಸ್ಯೆ ದಿನ ಗೋದಿ ಹುಗ್ಗಿ ಸಹ ವಿಶೇಷತೆಯಿಂದ ಕೂಡಿತ್ತು.

ಸಂಡಿಗೆ ಸೇವೆ: ಮಹಾದಾಸೋಹದ ಕೊನೆ ದಿನ ಹುಗ್ಗಿ ಜತೆಗೆ ಭಕ್ತರು ಸಂಡಿಗೆ ಸವೆದರು. ಪ್ರಸಾದದ ರುಚಿ ಸಂಡಿಗೆ ಹೆಚ್ಚಿಸಿತು.

ನಗರದ ಮುಖಂಡರಾದ ವೀರೇಶ ಮಹಾಂತಯ್ಯ ಮಠ ಕುಟುಂಬದಿಂದ ಅಮಾವಾಸ್ಯೆ ದಿನ ದಾಸೋಹಕ್ಕಾಗಿ ಸಂಡಿಗೆ ಸೇವೆ ಜರುಗಿತು. ಮಹಾಂತಯ್ಯಮಠ ಕುಟುಂಬದವರು ಸಂಡಿಗೆ ಸೇವೆಗೈದರು. ಐದು ಲಕ್ಷದಷ್ಟು ಸಂಡಿಗೆ ಮಾಡಲಾಗಿತ್ತು. 6 ಕ್ವಿಂಟಲ್ ಸಂಡಿಗೆ ತರಿಸಿದ್ದರು.