ಅದ್ಧೂರಿಯಾಗಿ ನೆರವೇರಿದ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ

| Published : Nov 04 2025, 12:00 AM IST

ಅದ್ಧೂರಿಯಾಗಿ ನೆರವೇರಿದ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲೇ ಪ್ರಸಿದ್ಧಿಯಾಗಿರುವ ಶ್ರೀ ಪ್ರಸನ್ನ ಗಣಪತಿ ಉತ್ಸವದ ವಿಸರ್ಜನಾ ಮಹೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ನಗರದಾದ್ಯಂತ ಭಕ್ತಿ ಮತ್ತು ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು, ಸಾವಿರಾರು ಭಕ್ತರು ಗಣೇಶನ ದರ್ಶನಕ್ಕಾಗಿ ಹರಿದುಬಂದರು. ಮೆರವಣಿಗೆ ಬಿ.ಎಚ್.ರಸ್ತೆ ಮಾರ್ಗವಾಗಿ ಧನ್ವಂತರಿ ವೃತ್ತ, ಪಿ.ಪಿ.ವೃತ್ತ, ತರಕಾರಿ ಮಾರುಕಟ್ಟೆ ಹಾಗೂ ಹಾಸನ ವೃತ್ತದ ಮೂಲಕ ಕಂತೇನಹಳ್ಳಿ ಕೆರೆ ತೀರಕ್ಕೆ ತಲುಪಿತು. ಮಾರ್ಗಮಧ್ಯದಲ್ಲಿ ಗಣಪತಿಗೆ ಭಕ್ತರು ಪುಷ್ಪನಮನ ಸಲ್ಲಿಸಿ, ಪೂಜೆ ನಡೆಸಿದರು. ಎಪಿಎಂಸಿ ವೃತ್ತದಿಂದ ಕಂತೇನಹಳ್ಳಿ ತನಕ ರಸ್ತೆ ಎರಡೂ ಬದಿಗಳಲ್ಲಿ ಭಕ್ತರು ಮತ್ತು ನಾಗರಿಕರು ಗಣಪತಿಯ ದರ್ಶನಕ್ಕಾಗಿ ಕಿಕ್ಕಿರಿದು ನಿಂತು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯದಲ್ಲೇ ಪ್ರಸಿದ್ಧಿಯಾಗಿರುವ ಶ್ರೀ ಪ್ರಸನ್ನ ಗಣಪತಿ ಉತ್ಸವದ ವಿಸರ್ಜನಾ ಮಹೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ನಗರದಾದ್ಯಂತ ಭಕ್ತಿ ಮತ್ತು ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದ್ದು, ಸಾವಿರಾರು ಭಕ್ತರು ಗಣೇಶನ ದರ್ಶನಕ್ಕಾಗಿ ಹರಿದುಬಂದರು.ಶುಕ್ರವಾರ ರಾತ್ರಿ ಆರಂಭವಾದ ಈ ಅದ್ಧೂರಿ ಉತ್ಸವಕ್ಕೆ ಶನಿವಾರ ಬೆಳಗ್ಗೆ ಎಪಿಎಂಸಿ ಮಾರುಕಟ್ಟೆಯಿಂದ ಭವ್ಯ ಮೆರವಣಿಗೆಗೆ ಚಾಲನೆ ದೊರೆಯಿತು. ಹತ್ತಾರು ಜನಪದ ಕಲಾತಂಡಗಳ ಪ್ರದರ್ಶನಗಳು, ಡಿಜೆ ಸದ್ದಿಗೆ ತಾಳ ಹಾಕಿದ ಯುವಕ–ಯುವತಿಯರ ನೃತ್ಯಗಳು ಹಾಗೂ ಪುಷ್ಪಾಲಂಕೃತ ಗಣಪತಿ ಮೂರ್ತಿಯ ಸೊಬಗು ನಗರವನ್ನು ಕಂಗೊಳಿಸಿತು. ಮೆರವಣಿಗೆ ಬಿ.ಎಚ್.ರಸ್ತೆ ಮಾರ್ಗವಾಗಿ ಧನ್ವಂತರಿ ವೃತ್ತ, ಪಿ.ಪಿ.ವೃತ್ತ, ತರಕಾರಿ ಮಾರುಕಟ್ಟೆ ಹಾಗೂ ಹಾಸನ ವೃತ್ತದ ಮೂಲಕ ಕಂತೇನಹಳ್ಳಿ ಕೆರೆ ತೀರಕ್ಕೆ ತಲುಪಿತು. ಮಾರ್ಗಮಧ್ಯದಲ್ಲಿ ಗಣಪತಿಗೆ ಭಕ್ತರು ಪುಷ್ಪನಮನ ಸಲ್ಲಿಸಿ, ಪೂಜೆ ನಡೆಸಿದರು. ಎಪಿಎಂಸಿ ವೃತ್ತದಿಂದ ಕಂತೇನಹಳ್ಳಿ ತನಕ ರಸ್ತೆ ಎರಡೂ ಬದಿಗಳಲ್ಲಿ ಭಕ್ತರು ಮತ್ತು ನಾಗರಿಕರು ಗಣಪತಿಯ ದರ್ಶನಕ್ಕಾಗಿ ಕಿಕ್ಕಿರಿದು ನಿಂತು ಸಂಭ್ರಮಿಸಿದರು.ನಗರದ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಹರ್ಷೋದ್ಗಾರ ವ್ಯಕ್ತಪಡಿಸಲಾಯಿತು. ಬೃಹತ್ ಡಿಜೆ ಪ್ರದರ್ಶನಗಳು, ಮಹಿಳಾ ಡೊಳ್ಳುಕುಣಿತ, ವೀರಭದ್ರ ಕುಣಿತ, ಯಕ್ಷಗಾನ ಹಾಗೂ ಜಾನಪದ ಕಲಾತಂಡಗಳ ಪ್ರದರ್ಶನಗಳು ಮೆರವಣಿಗೆಗೆ ಮತ್ತಷ್ಟು ರಂಗ ತುಂಬಿದವು. ಮೆರವಣಿಗೆಯ ಅಂತ್ಯದಲ್ಲಿ ಕಂತೇನಹಳ್ಳಿ ಕೆರೆ ತೀರದಲ್ಲಿ ಅಮೋಘ ಮದ್ದು ಗುಂಡುಗಳ ಪ್ರದರ್ಶನ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ಆಕಾಶದಲ್ಲಿ ಚುಕ್ಕಿ ನಕ್ಷತ್ರದಂತೆಯೇ ಹೊಳೆಯುವ ಪಟಾಕಿಗಳು ಕಣ್ಮನ ಸೆಳೆದವು.

ವಿಸರ್ಜನೆ ವೇಳೆ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು, “ಅರಸೀಕೆರೆಯ ಶ್ರೀ ಪ್ರಸನ್ನ ಗಣಪತಿ ಉತ್ಸವವು ದೀರ್ಘ ಇತಿಹಾಸ ಹೊಂದಿದೆ. ಎಲ್ಲರೂ ಸಹಭಾಗಿಯಾಗಿ ಶಾಂತಿಯುತವಾಗಿ ಉತ್ಸವ ಆಚರಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ವರ್ಷ ಇನ್ನಷ್ಟು ವೈಭವದಿಂದ ಗಣಪತಿ ಉತ್ಸವ ನಡೆಸೋಣ” ಎಂದು ಹೇಳಿದರು.ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿದ್ದು, ಕಾರ್ಯಕ್ರಮ ಶಿಸ್ತುಬದ್ಧವಾಗಿ ಮುಕ್ತಾಯವಾಯಿತು.ಅಂತಿಮವಾಗಿ ಮಂಗಳವಾದ್ಯದ ನಾದದ ನಡುವೆ ಮಹಾಮಂಗಳಾರತಿ ನೆರವೇರಿಸಿ, 84ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯನ್ನು ಭಕ್ತಿಭಾವದಿಂದ ವಿಸರ್ಜಿಸಲಾಯಿತು.