ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ದೇಸಿ ಕಲೆ ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಕೋಲಾಟ, ಯಕ್ಷಗಾನ ಕಲೆಗಳನ್ನು ಪ್ರದರ್ಶಿಸಿರುವುದೇ ಸಾಕ್ಷಿ
ಕುಷ್ಟಗಿ: ದೇಸಿ ಕಲೆ ಜೀವಂತವಾಗಿಡಲು ವಿದ್ಯಾರ್ಥಿಗಳಿಗೆ ಗ್ರಾಮೀಣ ಕಲೆ ಪರಿಚಯಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಇಸಿಒ ರಾಘಪ್ಪ ಶ್ರೀರಾಮ್ ಅಭಿಪ್ರಾಯಪಟ್ಟರು.
ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ದೋಟಿಹಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ದೇಸಿ ಕಲೆ ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಕೋಲಾಟ, ಯಕ್ಷಗಾನ ಕಲೆಗಳನ್ನು ಪ್ರದರ್ಶಿಸಿರುವುದೇ ಸಾಕ್ಷಿಯಾಗಿದೆ ಎಂದ ಅವರು, ರಸಪ್ರಶ್ನೆ, ಕಂಠಪಾಠ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ವೃದ್ಧಿಸಲು ಅನುಕೂಲವಾಗುತ್ತದೆ. ಸ್ಪರ್ಧೆ ಮುಖ್ಯ, ಸೋಲು ಗೆಲುವು ನಂತರದ ವಿಷಯ. ತೀರ್ಪುಗಾರರು ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಪ್ರತಿಭೆಗೆ ತಕ್ಕ ತೀರ್ಪು ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ಸಿಆರ್‌ಪಿ ಈರಣ್ಣ ಕರಡಕಲ್ ಮಾತನಾಡಿ, ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಿಕ್ಕ ಉತ್ತಮ ವೇದಿಕೆ ಪ್ರತಿಭಾ ಕಾರಂಜಿ. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಪ್ರೋತ್ಸಾಹಿಸಿ ಅವರಿಗೆ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವಂತಹ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುಭಾಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ, ಗುರಪ್ಪ ಕುರಿ, ಸೇರಿದಂತೆ ದೋಟಿಹಾಳ ವಲಯ ಮಟ್ಟದ ವ್ಯಾಪ್ತಿಯಲ್ಲಿನ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.