ಇಂಟರ್‌ನ್ಯಾಷನಲ್ ಯೋಗದಲ್ಲಿ ಜಯಶೀಲರಾದ ಉಜ್ವಲ್ ಅವರಿಗೆ ಶಾಸಕ ಎಸ್.ಮುನಿರಾಜು ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ತಾರಸಿ ತೋಟಗಳೆಂದರೆ ಕೇವಲ ಹೂವಿನ ಅಥವಾ ಅಲಂಕಾರಿಕ ಗಿಡಗಳನ್ನು ಬೆಳೆಸುವುದಕಷ್ಟೇ ಸೀಮಿತವಾಗಬೇಕಿಲ್ಲ, ನಗರದಲ್ಲಿಯೂ ದಿನನಿತ್ಯ ಬೇಕಾಗುವ ಹಣ್ಣು, ತರಕಾರಿ ಬೆಳೆಗಳನ್ನು ಯಶಸ್ವಿಯಾಗಿ ಚಿಕ್ಕ ತಾರಸಿ ತೋಟದಲ್ಲಿ ಬೆಳೆಯಬಹುದು ಎಂದು ತರಬೇತಿದಾರರಾದ ಪ್ರತಿಮಾ ಅಡಿಗ ಸಲಹೆ ನೀಡಿದರು.ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಸದೇಶಿ ಜಾಗರಣ ಮಂಚ್- ಕರ್ನಾಟಕ ವತಿಯಿಂದ ಆಯೋಜಿಸಲಾದ ಸ್ವದೇಶಿ 4ನೇ ದಿನದ ಮೇಳದಲ್ಲಿ ತಾರಸಿ ತೋಟ ಮತ್ತು ಕೈ ತೋಟದ ತರಬೇತಿ ಶಿಬಿರದಲ್ಲಿ ಮಾತನಾಡಿದರು. ನಗರ ಹಾಗೂ ಪಟ್ಟಣ ಪ್ರದೇಶದ ನಾಗರಿಕರಿಗೆ ಕೈತೋಟ ಮತ್ತು ತಾರಸಿ ತೋಟದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಅಗತ್ಯ ತರಬೇತಿ, ಪರಿಕರ ಹಾಗೂ ಮೂಲಸೌಲಭ್ಯ ಕಲ್ಪಿಸಲು ತೋಟಗಾರಿಕೆ ಇಲಾಖೆಯು ‘ಕೈತೋಟ ಹಾಗೂ ತಾರಸಿ ತೋಟಗಳ ಉತ್ತೇಜನ’ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ಕೈತೋಟಗಳು ಕಣ್ಮರೆಯಾಗುತ್ತಿವೆ. ಹಣ್ಣು ಹಾಗೂ ತರಕಾರಿಗೆ ಮಾರುಕಟ್ಟೆಗಳನ್ನೇ ಅನುಸರಿಸಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸಿ, ಸಮತೋಲನ ಆಹಾರವನ್ನು ಅವರವರ ಮನೆಯಲ್ಲಿಯೇ ಪಡೆಯಲು ನೆರವಾಗುವುದು ಯೋಜನೆಯ ಆಶಯವಾಗಿದೆ ಎಂದರು. ಯೋಜನೆಯ ಉದ್ದೇಶಗಳು:ಕೈತೋಟ ಹಾಗೂ ತಾರಸಿ ತೋಟದಲ್ಲಿ ತರಕಾರಿ ಬೆಳೆಗಳನ್ನು ಸ್ವತಃ ಸಾವಯವ ಪದ್ಧತಿಯಲ್ಲಿ ಬೆಳೆಯಲು ತಾಂತ್ರಿಕ ಮಾರ್ಗದರ್ಶನ ಹಾಗೂ ಉತ್ತೇಜಿಸುವುದು. ಎರೆಹುಳು ಗೊಬ್ಬರ, ಕಾಂಪೋಸ್ಟ್ ಮೊದಲಾದವುಗಳನ್ನು ತಯಾರಿಸಿಕೊಂಡು ಮರುಬಳಕೆ ಮಾಡುವುದು, ಮಳೆ ನೀರು ಸಂಗ್ರಹ ಮತ್ತು ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಕೊಡುವುದು. ಬಳಿಕ ಮಾತನಾಡಿದ ಶಾಸಕ ಎಸ್.ಮುನಿರಾಜು ಕುಟುಂಬದ ಸದಸ್ಯರು ಅದರಲ್ಲಿಯೂ ಮಹಿಳೆಯರು ಮತ್ತು ಮಕ್ಕಳಲ್ಲಿ ಕೈತೋಟ, ತಾರಸಿ ತೋಟಗಳಲ್ಲಿ ಆಸಕ್ತಿ ಮೂಡಿಸಿ, ದೈಹಿಕ, ಮಾನಸಿಕ ಆರೋಗ್ಯದ ಪ್ರಾಮುಖ್ಯತೆ, ಸಮತೋಲನ ಆಹಾರ, ಒತ್ತಡ ನಿರ್ವಹಣೆ ಹಾಗೂ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವುದು. ಮಳೆ ನೀರು ಸಂಗ್ರಹ, ಮಣ್ಣಿಲ್ಲದೇ ಪೋಷಕಾಂಶವುಳ್ಳ ನೀರಿನಲ್ಲಿ ಗಿಡ ಬೆಳೆಸುವುದು, ಗಿಡಗಳನ್ನು ಗಾಳಿ ಮತ್ತು ತೇವಾಂಶ ವಾತಾವರಣದಲ್ಲಿ ಮಣ್ಣಿಲ್ಲದೇ ಬೆಳೆಯವ ಪದ್ಧತಿ ಮತ್ತಿತರ ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ ಎಂದರು.
ಇಂದು ಏನೇನು...?ಜ.11.ರಂದು ಬೆ.7.30 ರಿಂದ 8.30 ರವರೆಗೆ ರಂಗೋಲಿ ಸ್ಪರ್ಧೆ, ಬೆ. 11 ರಿಂದ ಮ.1 ರ ವರೆಗೆ ಕುಟುಂಬ ಪ್ರಭೋದನ ಕಾರ್ಯಕ್ರಮ ರಾ.7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ಜನಪದ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸೂರಜ್ ಫೌಂಡೇಷನ್ ಸಂಸ್ಥಾಪಕಿ ಸುಜಾತ ಮುನಿರಾಜು, ಮೇಳದ ಸಂಘಟಕ ಭರತ್ ಸೌಂದರ್ಯ , ಸಹ ಸಂಘಟಕ ಲಕ್ಷ್ಮಿ ವೆಂಕಟೇಶ್, ಉಮಾದೇವಿ ನಾಗರಾಜು, ಕೃಷ್ಣಮೂರ್ತಿ, ಗುರುಪ್ರಸಾದ್, ಮುರುಳಿ ಮುಂತಾದವರಿದ್ದರು.