ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಮಾ.22ರಂದು ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ. ಎಸ್. ಬೋಜೇಗೌಡ ವಿರೋಧ ವ್ಯಕ್ತಪಡಿಸಿದ್ದು ಯಾವುದೇ ಕಾರಣಕ್ಕೂ ಬೇಲೂರು ಬಂದ್ ಮಾಡದಂತೆ ವರ್ತಕರಲ್ಲಿ ಮನವಿ ಮಾಡಿದ್ದಾರೆ.ಈಗಾಗಲೇ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು ಮಾ. 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷೆಗಳು ಸಹ ಅಂದಿನಿಂದಲೇ ಪ್ರಾರಂಭವಾಗುತ್ತಿದೆ. ಮಕ್ಕಳಿಗೆ ತೊಂದರೆ ಆಗುವುದರ ಜೊತೆಗೆ ಹಬ್ಬ ಹರಿದಿನಗಳು ಹತ್ತಿರದಲ್ಲಿರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್ ಕರೆ ನೀಡುವಾಗ ಕರ್ನಾಟಕ ರಾಜ್ಯದ ಜನತೆಯ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ಬಂದ್ ಮಾಡುವುದರ ಮೂಲಕ ಈಗಿರುವ ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಅಸಾಧ್ಯವಾಗಿದೆ. ಗಡಿಭಾಗದ ಕರ್ನಾಟಕ ಜನತೆಗೆ ಆಗುತ್ತಿರುವ ಅನ್ಯಾಯವನ್ನು ಬೇರೆ ರೀತಿಯ ಹೋರಾಟ ಮಾಡುವುದರ ಮೂಲಕ ಸರ್ಕಾರದ ಗಮನವನ್ನು ಸೆಳೆಯಬೇಕು. ಬಂದ್ ಮಾಡುವುದರಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ನಷ್ಟವಾಗುವುದು ಬಿಟ್ಟರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಹಾಗಾಗಿ ಈ ಬಂದ್‌ಗೆ ಸಂಘಟನೆಗಳು, ವರ್ತಕರು, ಹೋಟೆಲ್ ಮಾಲೀಕರು, ಆಟೋ ಮಾಲೀಕರು, ಶಾಲಾ-ಕಾಲೇಜುಗಳು ಬೆಂಬಲ ಕೊಡಬಾರದೆಂದು ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಮನವಿ ಮಾಡಿದ್ದಾರೆ.