ಪ್ರಧಾನಿ ಮೋದಿ ದೀರ್ಘಾಯುಷಿ ಆಗಲು ಪೂಜೆ

| Published : May 04 2024, 12:35 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೀರ್ಘ ಆಯಸ್ಸು ಹೊಂದುವಂತೆ ಭಗವಂತ ಕರುಣಿಸಲಿ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೀರ್ಘ ಆಯಸ್ಸು ಹೊಂದುವಂತೆ ಭಗವಂತ ಕರುಣಿಸಲಿ ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು. ಪ್ರದಾನ ಆರ್ಚಕರು ಪ್ರಧಾನಿ ನರೆಂದ್ರ ಮೋದಿ ಅವರ ಹೆಸರಿನಲ್ಲಿ ಅರ್ಚನೆ ಮಾಡಿದರು. ಜೊತೆಗೆ ಶ್ರೀ ಚಾಮರಾಜೇಶ್ವರ ಸ್ವಾಮಿಗೆ ಬಿಲ್ವಾರ್ಚನೆ, ಅಭಿಷೇಕ, ಮಹಾ ಮಂಗಳಾರತಿ ಮಾಡಲಾಯಿತು. ದೇಶ ಸುಭಿಕ್ಷೆಯಿಂದ ಇರಲಿ. ಮತ್ತೇ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದು ಸಂಕಲ್ಪ ಮಾಡಿದರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯುರು ಕಮಲಮ್ಮ ಮಾತನಾಡಿ, ವಿಶ್ವನಾಯಕ ನರೇಂದ್ರ ಮೋದಿ ಕುರಿತ ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆಯವರ ಕೀಳು ಅಭಿರುಚಿಯ ಹೇಳಿಕೆಯನ್ನು ಬಿಜೆಪಿ ಅತ್ಯುಗ್ರವಾಗಿ ಖಂಡಿಸುತ್ತದೆ. ಮೋದಿ ಅವರಿಗೆ ದೀರ್ಘಾಯಸ್ಸು ಕೋರಿ ಮಹಿಳಾ ಮೋರ್ಚಾದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಇದು ರಾಜು ಕಾಗೆಯವರ ಹೇಳಿಕೆಯಂತಿಲ್ಲ. ರಾಹುಲ್ ಗಾಂಧಿಯವರ ಮತ್ತು ಕಾಂಗ್ರೆಸ್ಸಿನ ಮನಸ್ಥಿತಿ ಕಾಂಗ್ರೆಸ್ಸಿನ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು. ಮೋದಿಜೀ ಅವರು ಯಾಕೆ ಸಾಯಬೇಕು? ೩೭೦ನೇ ವಿಧಿ ರದ್ದು ಮಾಡಿ ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿದ್ದಕ್ಕೆ ಅವರು ಸಾಯಬೇಕೇ? ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ೬ ಸಾವಿರ ರೂಪಾಯಿ ನೀಡಿ ರೈತರ ಬದುಕನ್ನು ಹಸನಾಗಿ ಮಾಡಿದ್ದಕ್ಕೆ ಅವರು ಸಾಯಬೇಕೇ? ಮಹಿಳೆಯರಿಗೆ ಶೇಕಡಾ ೩೩ ರಷ್ಟು ಮೀಸಲಾತಿ ಕೊಟ್ಟದ್ದಕ್ಕೆ ಅವರು ಸಾಯಬೇಕೇ? ಜನ್ ಧನ್ ಬ್ಯಾಂಕ್ ಖಾತೆಗಳ ಮೂಲಕ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮಾಡಿ ಕಾಂಗ್ರೆಸ್ಸಿನ ಭ್ರ ಷ್ಟಚಾರ ತಪ್ಪಿಸಿ ಪ್ರತಿಯೊಂದು ರೂಪಾಯಿ ಫಲಾನುಭವಿಯ ಖಾತೆಗೆ ಸೇರುವಂತೆ ಮಾಡಿದ್ದಕ್ಕಾಗಿ ಅವರ ಸಾವನ್ನು ಕಾಂಗ್ರೆಸ್ ಬಯಸುತ್ತದೆಯೇ? ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಿಕೊಟ್ಟು ಮಹಿಳೆಯರ ಘನತೆ ಹೆಚ್ಚಿಸಿದ್ದಕ್ಕಾಗಿ ಮೋದಿಜೀ ಅವರ ಅಂತ್ಯವನ್ನು ಕಾಂಗ್ರೆಸ್ಸಿಗರು ಬಯಸುತ್ತಾರಾ? ವಿಶ್ವದ ೧೧ನೇ ಆರ್ಥಿಕ ಶಕ್ತಿಯಾಗಿದ್ದ ನಮ್ಮ ದೇಶವನ್ನು ೫ನೇ ಆರ್ಥಿಕ ಶಕ್ತಿಯಾಗಿ ಮಾಡಿದ್ದಕ್ಕಾಗಿ ಈ ಕೆಟ್ಟದ್ದನ್ನು ಕಾಂಗ್ರೆಸ್ಸಿಗರು ಬಯಸುತ್ತಾರಾ? ಎಂದು ಅವರು ಪ್ರಶ್ನೆ ಮಾಡಿದರು. ರಾಜ್ಯದ ಕಾಂಗ್ರೆಸ್ ಸಚಿವ ಆರ್.ಬಿ.ತಿಮ್ಮಾಪುರ ಅವರು ಪ್ರಜ್ವಲ್ ರೇವಣ್ಣ ಮತ್ತು ಭಗವಾನ್ ಶ್ರೀಕೃಷ್ಣರನ್ನು ಹೋಲಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರವನ್ನು ತಿರಸ್ಕರಿಸಿ ಅಪಮಾನ ಮಾಡಿತ್ತು. ಇದೀಗ ಭಗವಾನ್ ಶ್ರೀಕೃಷ್ಣನಿಗೆ ಅವಮಾನ ಮಾಡಿದೆ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಯಾಗಿದ್ದು, ರಾಹುಲ್ ಗಾಂಧಿಯವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಇದು ಪಾಕಿಸ್ತಾನದ ಮಾಜಿ ಸಚಿವ ಫಹಾದ್ ಹುಸೇನ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಮೂಲಕ ವೈರಲ್ ಆಗಿದೆ. ಕಾಂಗ್ರೆಸ್ ಕಾ ಹಾತ್ ಪಾಕಿಸ್ತಾನ್ ಕೇ ಸಾಥ್ ಎಂಬುದು ಇದರಿಂದ ಸ್ಪಷ್ಟ. ಪಾಕ್ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ತೋರಿಸುವ ಪಕ್ಷ ಕಾಂಗ್ರೆಸ್ ಎಂಬುದು ಸ್ಪಷ್ವವಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಜಿಲ್ಲಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಶೈಲಾ, ಉಪಾಧ್ಯಕ್ಷೆ ದಾಕ್ಷಾಯಿಣಿ, ಕಾರ್ಯದರ್ಶಿ ವನಜಾಕ್ಷಿ, ಗ್ರಾಮಾಂತರ ಮಂಡಲ ಅಧ್ಯಕ್ಷೆ ಮಹೇಶ್ವರಿ ಕಾರ್ಯದರ್ಶಿ ರಾಧಾ ಇತರರು ಇದ್ದರು.