ಸಾರಾಂಶ
ಕಿಕ್ಕೇರಿ: ಹೋಬಳಿಯ ಅಂಕನಹಳ್ಳಿಯಲ್ಲಿ ರೈತರು ಹೊನ್ನಾರುಕಟ್ಟಿ ಮಳೆಗಾಗಿ ಪ್ರಾರ್ಥಿಸಿದರು. ರೈತರು ಒಂದೆಡೆ ಸೇರಿ ಮಳೆಗಾಗಿ ಶ್ರದ್ಧಾ- ಭಕ್ತಿಯಿಂದ ವರುಣ ದೇವರಲ್ಲಿ ಪ್ರಾರ್ಥಿಸಿದರು. ಗ್ರಾಮದ ಪ್ರಮುಖ ಸ್ಥಳ ಬಸವೇಶ್ವರ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಬಾರಿ ಮಳೆ ಸೂಚನೆ ಇಲ್ಲದೆ ಬೇಸಾಯ ಕುಂಠಿತವಾಗಿದೆ. ಜನ, ಜಾನುವಾರುಗಳಿಗೆ ಹನಿ ನೀರಿಗೂ ಪರಿತಪಿಸುವಂತಾಗಿದೆ ಎಂದು ಮಳೆ ಆಗಮನಕ್ಕಾಗಿ ಕಪ್ಪು ಹಾಗೂ ಬಿಳಿ ಎತ್ತುಗಳನ್ನು ಹುಡುಕಿ ತರಲಾಯಿತು. ಶುಭ ಸಂಕೇತವಾದ ಎತ್ತುಗಳನ್ನು ತೊಳೆದು, ಕೊಂಬು, ಮೈಗೆ ಎಣ್ಣೆ ಸವರಲಾಯಿತು. ನೊಸಲಿಗೆ ಕುಂಕುಮ ಅರಿಷಿಣ ತಿಲಕವನ್ನುಇಟ್ಟು ಕೊರಳಿಗೆ ಗೆಜ್ಜೆಕಟ್ಟಿ, ಹೂಮಾಲೆ ತೊಡಿಸಲಾಯಿತು .ಕೊರಳಿಗೆ ನೊಗವನ್ನು ಕಟ್ಟಿ ನೇಗಿಲು ಹೂಡಲಾಯಿತು.ರಾಸುಗಳಿಗೆ ಆರತಿ ಎತ್ತಿ ಹೊನ್ನಾರಿಗೆ ಚಾಲನೆ ನೀಡಲಾಯಿತು. ತಮಟೆ ವಾದ್ಯದೊಂದಿಗೆ ಹೊನ್ನಾರು ಸಂಭ್ರಮದ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಇಡೀ ಗ್ರಾಮದಲ್ಲಿ ನೇಗಿಲಿನಿಂದ ಮಳೆ ರೇಖೆ ಎಳೆಯಲಾಯಿತು. ರಾಸುಗಳಿಗೆ ರೋಗರುಜಿನ ಬಾರದಂತೆ ಗ್ರಾಮದಲ್ಲಿ ಸಮೃದ್ಧಿಯಾಗಿ ಮಳೆ ಬೀಳಲಿ, ಉತ್ತಮ ಬೆಳೆ, ಫಸಲು ಲಭಿಸಲಿ. ರೈತನ ಬದುಕು ಹಸನಾಗಲಿ ಎಂದು ರೈತರು ದೇವರಲ್ಲಿ ಮೊರೆಇಟ್ಟರು. ಗ್ರಾಪಂ ಮಾಜಿ ಅಧ್ಯಕ್ಷ ಮಂಜೇಗೌಡ, ಸುಧಾ ದೇವರಾಜು, ಎ.ಬಿ. ಮೂರ್ತಿ, ನಾಗಣ್ಣ, ನಂಜಪ್ಪ, ರಾಜೇಗೌಡ, ರವಿ, ಅಣ್ಣೇಗೌಡ, ಶಿವೇಗೌಡ, ಶರತ್, ರಮೇಶ್, ಅಂಕಿತ್ ಗ್ರಾಮಸ್ಥರು ಉಪಸ್ಥಿತರಿದ್ದರು.