ಸಾರಾಂಶ
ಬರಗಾಲ ಆವರಿಸಿರುವುದರಿಂದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಳೆರಾಯನ ಮೆರವಣಿಗೆ ಮಾಡುವ ಮುಖಾಂತರ ಮಳೆಗಾಗಿ ಪ್ರಾರ್ಥಿಸಿದರು,
ಕನ್ನಡಪ್ರಭ ವಾರ್ತೆ ಕುಣಿಗಲ್ ಬರಗಾಲ ಆವರಿಸಿರುವುದರಿಂದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಳೆರಾಯನ ಮೆರವಣಿಗೆ ಮಾಡುವ ಮುಖಾಂತರ ಮಳೆಗಾಗಿ ಪ್ರಾರ್ಥಿಸಿದರು,ಪಟ್ಟಣದ ಕೆ. ಆರ್. ಎಸ್ ಅಗ್ರಹಾರದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮಳೆರಾಯನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ನಂತರ ಮೂರು ಗಂಟೆ ಸಮಯದಲ್ಲಿ ಮಳೆರಾಯನ ಮೂರ್ತಿಯನ್ನು ತಲೆ ಮೇಲೆ ಹೊತ್ತು ಭಜರಂಗದಳದ ಕಾರ್ಯಕರ್ತರು ಪಟ್ಟಣದ ಮುಖ್ಯ ಬೀದಿಗಳಲ್ಲಿ "ಬಾರೋ ಬಾರೋ ಮಳೆರಾಯ ಉಯ್ಯೋ ಉಯ್ಯೋ ಮಳೆರಾಯ " ಎಂಬ ಹಲವಾರು ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದರು,
ಮನೆಯ ಮಹಿಳೆಯರು ಮಳೆರಾಯನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ನಂತರ ಮನೆಯಲ್ಲಿದ್ದ ಕೊಡಗಳಿಂದ ನೀರನ್ನು ಸುರಿದು ಮಳೆ ಬರುವಂತೆ ದೇವರಲ್ಲಿ ಪ್ರಾರ್ಥಿಸಿದರು. ತಮಟೆಯ ತಾಳಕ್ಕೆ ಬೀದಿಯ ಸಣ್ಣಪುಟ್ಟ ಮಕ್ಕಳು ಕುಣಿದು ಕುಪ್ಪಳಿಸಿ ಮಳೆರಾಯನ ಹಾಡುಗಳನ್ನು ಹಾಡಿದರು. ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕುಣಿಗಲ್ ದೊಡ್ಡ ಕೆರೆ ಆವರಣದಲ್ಲಿ ವಿಸರ್ಜನೆ ಮಾಡಲಾಯಿತು. ಮಳೆರಾಯನ ವಿಗ್ರಹವನ್ನು ಕುಣಿಗಲ್ ಕಲಾವಿದ ಮಹೇಶ್ ನಿರ್ಮಿಸಿದ್ದರು. ಬಜರಂಗದಳದ ಪ್ರಮುಖರಾದ ಗಿರೀಶ್, ಶಾನೇ ಗೌಡ, ಕಾರ್ತಿಕ್ ಭಾಗವಹಿಸಿದ್ದರು.