ಮನಃಪರಿವರ್ತನೆಗೆ ಪ್ರಾರ್ಥನೆ, ಧ್ಯಾನ ಸಹಕಾರಿ: ಡಾ.ಹೆಗ್ಗಡೆ

| Published : May 01 2025, 12:50 AM IST

ಸಾರಾಂಶ

ಉಜಿರೆ ಲಾಯಿಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ೨೪೬ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರಾರ್ಥನೆ ಮತ್ತು ಧ್ಯಾನ ಮನಃಪರಿವರ್ತನೆಗೆ ಸಹಕಾರಿಯಾಗುತ್ತದೆ. ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತಿರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಉಜಿರೆ ಲಾಯಿಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ೨೪೬ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳಿಗೆ ಅವರು ಮಾರ್ಗದರ್ಶನ ನೀಡಿದರು.

ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ. ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ. ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಸುಖೀ ಜೀವನ ನಡೆಸಿ . ಕುಡಿತ ಬಿಟ್ಟು ನವಜೀವನ ನಡೆಸುವ ಸಂದರ್ಭ ಕುಟುಂಬ ಮತ್ತು ಸಮಾಜವನ್ನು ಪ್ರೀತಿಯಿಂದ ನೋಡುವ ಅವಕಾಶ ತಮಗೆ ದೊರಕುತ್ತದೆ ಎಂದು ಆಶೀರ್ವದಿಸಿದರು.

ಹೆಗ್ಗಡೆಯವರ ಕಚೇರಿ ಪ್ರಬಂಧಕ ರಾಜೇಂದ್ರ ದಾಸ್ ಉಪಸ್ಥಿತರಿದ್ದರು. ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ೭೩ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯ್ಸ್, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದಿನೇಶ್ ಮರಾಠಿ, ನಂದಕುಮಾರ್, ಜಯಾನಂದ, ಜಾಗೃತಿ ಸೌಧದ ಪ್ರಬಂಧಕ ಕಿಶೋರ್ ಕುಮಾರ್, ಶಿಬಿರದ ಆಪ್ತ ಸಲಹೆಗಾರ ಮಧು ಜಿ.ಆರ್ ಹಾಗೂ ಆರೋಗ್ಯ ಸಹಾಯಕರಾದ ಜಯಲಕ್ಷ್ಮಿ, ಪ್ರೆಸಿಲ್ಲಾ ಡಿ’ಸೋಜ ಮತ್ತು ನವಜೀವನ ಸಮಿತಿಯ ಸದಸ್ಯ ತಿಮ್ಮಪ್ಪ, ಸಂತೋಷ್ ಸಹಕರಿಸಿದರು.

ಮುಂದಿನ ವಿಶೇಷ ಶಿಬಿರ ಮೇ5ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.