ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಹಾಗೂ ನವಲಹಳ್ಳಿ ಗ್ರಾಮದಲ್ಲಿ ಜೂ. 29ರಂದು ಮಳೆರಾಯನ ಕೃಪೆಗಾಗಿ ರೈತರು ವಿಶೇಷ ಪೂಜೆ, ಜಲಾಭಿಷೇಕ ಹಾಗೂ ಮೌನವ್ರತ ಆಚರಿಸಿ ದೇವರ ಮೊರೆ ಹೋದರು.

ಕುಷ್ಟಗಿ: ಆಕಾಶದತ್ತ ಕಣ್ಣಿಟ್ಟು ಮಳೆಯ ನಿರೀಕ್ಷೆಯಲ್ಲಿರುವ ರೈತ ಸಮುದಾಯದ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹೊಲಗಳಲ್ಲಿ ಬಿತ್ತಿದ ಬೆಳೆಗಳು ಒಣಗಲಾರಂಭಿಸಿದ್ದು, ರೈತರಲ್ಲಿ ಚಿಂತೆ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ತಾವರಗೇರಾ ಪಟ್ಟಣ ಹಾಗೂ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಸೋಮವಾರ ಮಳೆರಾಯನ ಕೃಪೆಗಾಗಿ ರೈತರು ವಿಶೇಷ ಪೂಜೆ, ಜಲಾಭಿಷೇಕ ಹಾಗೂ ಮೌನವ್ರತ ಆಚರಿಸಿ ದೇವರ ಮೊರೆ ಹೋದರು.

ತಾಲೂಕಿನ ತಾವರಗೇರಾ ಪಟ್ಟಣದ ಮ್ಯಾಗಲಪೇಟೆಯ ಶ್ರೀ ಈಶ್ವರ ದೇವಸ್ಥಾನದಲ್ಲಿ ರೈತ ಸಂಗನಗೌಡ ಸರನಾಡಗೌಡ ಅವರು ಮೌನವ್ರತ ಆಚರಿಸಿ, ಮಡಿ ಬಟ್ಟೆ ಧರಿಸಿ ಶಿವಲಿಂಗಕ್ಕೆ 101 ಕೊಡ ನೀರಿನ ಜಲಾಭಿಷೇಕ ಮಾಡಿದರು.

ತಾಲೂಕಿನ ನವಲಹಳ್ಳಿ ಗ್ರಾಮದಲ್ಲೂ ಮಳೆಗಾಗಿ ಹಲವು ವರ್ಷಗಳಿಂದ ನಡೆದುಬರುತ್ತಿರುವ ಸಂಪ್ರದಾಯವನ್ನು ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪಾಲಿಸಿದರು. ಗ್ರಾಮದ ಯುವಕ ಶಿವಕುಮಾರ ಕಡೆಕೊಪ್ಪ ಅವರು ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಮೌನವ್ರತ ಆಚರಿಸಿ, ಗ್ರಾಮದ ಗುಡ್ಡೆಕಲ್ಲು ದೇವರಿಗೆ 101 ಕೊಡ ಜಲಾಭಿಷೇಕ ನೆರವೇರಿಸಿದರು.

ಆಚರಣೆಯ ಭಾಗವಾಗಿ ಗ್ರಾಮಸ್ಥರು ಸಂಪ್ರದಾಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಜಲಾಭಿಷೇಕದ ಸಂದರ್ಭದಲ್ಲಿ ನೀರು ಹೊರುವ ಮಾರ್ಗದಲ್ಲಿ ಯಾರೂ ಅಡ್ಡ ಹೋಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಜಲಾಭಿಷೇಕದ ಬಳಿಕ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ನೈವೇದ್ಯ ನಡೆಯಿತು. ಜಲಾಭಿಷೇಕ ಮಾಡಿದ ಶಿವಕುಮಾರ ಕಡೆಕೊಪ್ಪ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಉತ್ತಮ ಮಳೆಯಾಗಲಿ:‌ ಮಳೆ ಇಲ್ಲದೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜಮೀನಿನಲ್ಲಿ ಬಿತ್ತಿದ ಬೆಳೆಗಳು ಒಣಗುತ್ತಿವೆ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ರೈತರ ಕಷ್ಟ ದೂರವಾಗಲಿ ಎಂಬ ಆಶಯದಿಂದ ಈ ವಿಶೇಷ ಜಲಾಭಿಷೇಕ ನಡೆಸಲಾಗಿದೆ ಎಂದು ತಾವರಗೇರಾ ಪಟ್ಟಣದ ರೈತ ಬಸವರಾಜ ಗುಡದೂರು ಹೇಳಿದರು.

ಮಳೆ ಇಲ್ಲದೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಜಮೀನಿನಲ್ಲಿ ಬಿತ್ತಿದ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ನಮ್ಮ ಹಿರಿಯರು ನಡೆದುಕೊಂಡು ಬಂದ ಸಂಪ್ರದಾಯದಂತೆ ದೇವರಿಗೆ ಜಲಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಮಳೆರಾಯ ಕೃಪೆ ತೋರಿ ಉತ್ತಮ ಮಳೆಯಾಗಿ ರೈತರ ಬೆಳೆಗಳು ಉಳಿಯಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದು ನವಲಹಳ್ಳಿ ರೈತರಾದ ಪರಸಪ್ಪ ಚಿಟಗಿ ಮತ್ತು ಶರಣಪ್ಪ ಹೇಳಿದರು.