Prayers for the welfare of the world in Hariharapura

ಕೊಪ್ಪ: ​ಹರಿಹರಪುರದ ಪ್ರಸಿದ್ಧ ಶಾರದಾ ಲಕ್ಷ್ಮೀನರಸಿಂಹ ಪೀಠದ ಧರ್ಮಪೀಠಾಧೀಶ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಮಠದ ಗೋಶಾಲೆಯ ಗೋವುಗಳಿಗೆ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಸಲ್ಲಿಸಿ, ಮೇವು ಮತ್ತು ನೈವೇದ್ಯ ಸಮರ್ಪಿಸಿದರು.​ಗೋವುಗಳಿಗೆ ಹರಿದ್ರ, ಕುಂಕುಮ, ಪುಷ್ಪಮಾಲೆಗಳಿಂದ ಅಲಂಕರಿಸಿ ಧೂಪ-ದೀಪಗಳೊಂದಿಗೆ ಪೂಜಾ ವಿಧಿವಿಧಾನ ನೆರವೇರಿಸಿದ ಶ್ರೀಗಳು, ಬಳಿಕ ಗೋವುಗಳಿಗೆ ಪ್ರದಕ್ಷಿಣೆ ಹಾಕಿ ಲೋಕಕಲ್ಯಾಣ ಹಾಗೂ ಸಮಸ್ತ ಜೀವರಾಶಿಗಳ ಒಳಿತಿಗಾಗಿ ಪ್ರಾರ್ಥಿಸಿದರು. ಗೋವು ಕೇವಲ ಒಂದು ಪ್ರಾಣಿಯಲ್ಲ; ಸನಾತನ ಸಂಸ್ಕೃತಿಯಲ್ಲಿ ಸಮಸ್ತ ದೇವತೆಗಳ ವಾಸಸ್ಥಾನವಾಗಿರುವ ಸಾಕ್ಷಾತ್ ಕಾಮಧೇನು. ಗೋಸೇವೆ ಮತ್ತು ಗೋಸಂರಕ್ಷಣೆ ಪ್ರತಿಯೊಬ್ಬರ ಧಾರ್ಮಿಕ ಹಾಗೂ ನೈತಿಕ ಕರ್ತವ್ಯ. ಗೋವಿನ ಪೋಷಣೆಯಿಂದ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ತಿಳಿಸಿದರು. ​ಕಾರ್ಯಕ್ರಮದಲ್ಲಿ ಮಠದ ವೈದಿಕರು, ಸಿಬ್ಬಂದಿವರ್ಗ, ಭಕ್ತರು ಗೋಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.