ಸಾರಾಂಶ
ಚಳ್ಳಕೆರೆ: ಕಳೆದ ಸುಮಾರು 15 ವರ್ಷಗಳಿಂದ ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ವಿಶೇಷವಾಗಿ ಪ್ರತಿವರ್ಷ ನಡೆಯುವ ಹನುಮ ಜಯಂತಿಯೂ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ದೇವಸ್ಥಾನದ ಆರ್ಚಕರಾದ ನಾಗಶಯನ ಗೌತಮ್ ಮತ್ತು ತಂಡ ಭಕ್ತಿ-ಶ್ರದ್ಧೆಯಿಂದ ಪೂಜೆ ನಡೆಸಿ ಭಕ್ತಾಧಿಗಳ ಕೋರಿಕೆಗಳನ್ನು ಈಡೇರಿಸುವಂತೆ ದೇವರಲ್ಲಿ ಮೊರೆ ಇಡುತ್ತಾರೆ. ಈ ಬಾರಿಯೂ ನಾನು ಚಳ್ಳಕೆರೆ ಕ್ಷೇತ್ರವನ್ನು ಕೊರೋನಾ ಕಂಟಕದಿಂದ ಪಾರು ಮಾಡುವಂತೆ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರುವುದಾಗಿ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಭಾನುವಾರ ಸಂಜೆ ನಾಯಕನಹಟ್ಟಿ ರಸ್ತೆಯ ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಚಳ್ಳಕೆರೆ ಕ್ಷೇತ್ರದ ಜನರ ವಿಶ್ವಾಸ ನನಗೆ ಅತಿದೊಡ್ಡದು. ನಾನು ಮತ್ತೆ ಮೂರನೇ ಬಾರಿಗೆ ಶಾಸಕನಾಗಿ ಕಾರಣನಾಗಲು ಕರೇಕಲ್ ಆಂಜನೇಯ ಸ್ವಾಮಿಯ ಕೃಪೆ ಕಾರಣವೆಂದರು.ಆರ್ಚಕ ಸಿ.ಎನ್.ನಾಗಶಯನ ಗೌತಮ್ ಮಾತನಾಡಿ, ಅಭಿನಂದಿಸಿ ಪ್ರತಿ ವರ್ಷವೂ ಶಾಸಕರು ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಹಾಗೂ ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಶಾಸಕರು ಮಹಾ ದೈವಭಕ್ತರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸ್ವಯಂ ಪ್ರೇರಣೆಯಿಂದ ತೊಡಗುವುದಲ್ಲದೆ, ಎಲ್ಲಾ ವರ್ಗದ ಜನರಿಗೆ ನೆರವು ನೀಡುವಲ್ಲಿ ಮುಂದಾಗಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕರ ಮುಂದಾಲೋಚನೆಯಿಂದ ಬೃಹತ್ ಅಭಿವೃದ್ಧಿ ಕ್ಷೇತ್ರವಾಗಿ ವಿಸ್ತಾರವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಿಂಗಾರಾಜು, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ್, ಎಲ್‌ಐಸಿ ದುಗ್ಗಾವರ ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.