ಕನ್ನಡಪ್ರಭ ವಾರ್ತೆ ಮಂಡ್ಯ
ಸಕಾಲಕ್ಕೆ ಮಳೆ ಬಾರದೆ, ಕೃಷಿ ಚಟುವಟಿಕೆಗಳು ಚುರುಕುಗೊಳ್ಳದೆ ರೈತ ಕಂಗಾಲಾಗಿ ಭೀಕರ ಬರಗಾಲ ಎದುರಾಗುವ ಪರಿಸ್ಥಿತಿಯನ್ನು ತಪ್ಪಿಸಲು ವರುಣನ ಕೃಪೆಯಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿ ಅನ್ನಸಂತರ್ಪಣೆ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ನಾಯಕಿ ರೂಪಾ ಹರಳಕುಪ್ಪೆ ಹೇಳಿದರು.ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಶ್ರೀಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ಹುಣ್ಣಿಮೆಯ ಅಂಗವಾಗಿ ಕಾಯಕಯೋಗಿ ಫೌಂಡೇಶನ್ ಆಯೋಜಿಸಿದ್ದ ದಾಸೋಹ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯಶ್ರೀಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕಳೆದ ಮೂವತ್ತು ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಕಾವೇರಿ, ಕಬಿನಿ, ತುಂಗಭದ್ರ, ಕೃಷ್ಣ ಸೇರಿದಂತೆ ಎಲ್ಲಾ ನದಿಗಳು ಬತ್ತಿಹೋಗುವ ಹಂತ ತಲುಪಿರುವುದು ಆತಂಕ ಮೂಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಅನಿವಾರ‌್ಯವಾಗಿದ್ದು ರೈತರ ಬಾಳು ಹಸನಾಗಲೆಂದು ದೇವರನ್ನು ಪ್ರಾರ್ಥಿಸಿ ಅನ್ನದಾಸೋಹ ಮಾಡಲಾಗಿದೆ ಎಂದರು.ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ೧೨ನೇ ಶತಮಾನದಲ್ಲಿ ಸಮಸಮಾಜವನ್ನು ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿದ ವಿಶ್ವಗುರು ಬಸವಣ್ಣನವರ ತತ್ವವನ್ನು ೨೧ನೇ ಶತಮಾನದಲ್ಲಿ ಅನುಷ್ಟಾನಗೊಳಿಸಿದ ಮಹಾನ್ ಮಾನವತಾವಾದಿ ಸಿದ್ದಗಂಗಾಶ್ರೀಗಳ ನಿತ್ಯ ಸ್ಮರಣೆ ಮಂಡ್ಯದ ಉದ್ಯಾವನದಲ್ಲಿ ಹಸಿರಿನ ದಾಸೋಹದ ಮೂಲಕ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನ್ನ, ಅರಿವು, ಆಸರೆಯಂತಹ ತ್ರಿವಿಧ ದಾಸೋಹವನ್ನು ಎಲ್ಲಾ ಸಮುದಾಯಕ್ಕೂ ನಡೆಸುತ್ತಾ ಬಂದಿರುವ ಶ್ರೀ ಸಿದ್ಧಗಂಗಾಮಠದ ಸೇವೆ ಎಲ್ಲಾ ಮಠಗಳಿಗೂ ಮಾದರಿಯಾಗಿದೆ. ಸರ್ಕಾರ ಬಿಸಿಯೂಟ ಯೋಜನೆ ಜಾರಿಗೊಳಿಸಲು ಶ್ರೀಮಠ ಸ್ಫೂರ್ತಿಯಾಗಿದ್ದು ಸರ್ವರನ್ನೂ ಸಮಭಾವದಿಂದ ಕಂಡ ಪೂಜ್ಯಶ್ರೀಗಳು ಅಜರಾಮರವಾಗಿದ್ದಾರೆ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ದಾಸೋಹಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಅವರು ರೈತನಾಯಕಿ ರೂಪಾನಿತಿನ್ ಅವರಿಗೆ ‘ದಾಸೋಹಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್, ಹಿರಿಯ ಉಪಾಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಎಚ್.ಎಸ್.ಶಿವರುದ್ರಪ್ಪ, ಹೊಸಹಳ್ಳಿ ವಿಜಯ್, ಅವ್ವೇರಹಳ್ಳಿ ಬಸವಲಿಂಗ, ಪುರುಷರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೃಷ್ಣೇಆರಸ್, ಪೋತೇರಮಹದೇವು, ಮಹೇಶ್ ಕೆರಗೋಡು, ರಾಮೇಗೌಡ ಇತರರಿದ್ದರು. ಗಾಯಕ ವಿದ್ಯಾಶಂಕರ್ ವಚನಗಾಯನ ನಡೆಸಿಕೊಟ್ಟರು.