ಬಜೆಟ್ ಪೂರ್ವಭಾವಿ ಸಲಹೆ, ಸೂಚನೆಗೆ ಮಹಾಜನತೆ ನಿರಾಸಕ್ತಿ

| Published : Dec 08 2024, 01:19 AM IST

ಸಾರಾಂಶ

ದಾವಣಗೆರೆ ಪಾಲಿಕೆಯಲ್ಲಿ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆಯ ಬಜೆಟ್ ಪೂರ್ವಭಾವಿಯಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಅಭಿಪ್ರಾಯ, ಸಲಹೆ ಸೂಚನೆ ಸ್ವೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿ ವರ್ಷ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಬಜೆಟ್ ಪೂರ್ವಭಾವಿ ಸಲಹೆ, ಸೂಚನೆ ಪಡೆಯಲು ಕರೆದಿದ್ದ ಸಭೆಯದ್ದೂ ಅದೇ ಹಳೆ ಕಥೆ, ನೀಡಿದ ಸಲಹೆ, ಸೂಚನೆಗಳನ್ನು ಪಾಲಿಸಿದ್ದೂ ಅಷ್ಟರಲ್ಲೇ ಇದೆಯೆಂಬ ಕಾರಣಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಘಟನೆ ಶನಿವಾರ ನಡೆದಿದೆ.

ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷೆಯಲ್ಲಿ ಪಾಲಿಕೆಯ 2025-26ನೇ ಸಾಲಿನ ಪಾಲಿಕೆ ಬಜೆಟ್ ಪೂರ್ವಭಾವಿಯಾಗಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಲಹೆ, ಸೂಚನೆ ಪಡೆಯಲು ಕರೆಯಲಾಗಿದ್ದ ಸಭೆಗೆ ಆರಂಭದಿಂದ ಅಂತ್ಯದವರೆಗೂ ಸಾರ್ವಜನಿಕರು, ಸಂಘ-ಸಂಸ್ಥೆಗಳು ನಿರೀಕ್ಷಿತ ಮಟ್ಟದಲ್ಲಿ ಪಾಲ್ಗೊಳ್ಳದಿದ್ದುದು ಹಿಂದಿನ ವರ್ಷಗಳಂತೆ ಈ ಸಲವೂ ಮುಂದುವರಿದಿದೆ.

ಸಭೆಯ ಆರಂಭದಲ್ಲೇ ಮೇಯರ್ ಚಮನ್ ಸಾಬ್‌, ಆಯುಕ್ತೆ ರೇಣುಕಾ ಬಜೆಟ್ ಪೂರ್ವಭಾವಿ ಸಭೆಗೆ ಸಂಘ-ಸಂಸ್ಥೆಗಳು, ಸಾರ್ವಜನಿಕರು ನಿರೀಕ್ಷಿತ ಮಟ್ಟದಲ್ಲಿ ಪಾಲ್ಗೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇನ್ನು ಸಭೆಯಲ್ಲಿದ್ದ ಕೆಲವರು ಮತ್ತೆ ಅದೇ ಬೀದಿ ನಾಯಿಗಳ ಹಾವಳಿ, ಹಂದಿಗಳ ಹಾವಳಿ, ಸ್ವಚ್ಛತೆ, ಕುಡಿಯುವ ನೀರು, ಗುಂಡಿ ಬಿದ್ದ ರಸ್ತೆಗಳ ಸಮಸ್ಯೆಗಳ ಬಗ್ಗೆ ಹೇಳಿಕೊಂಡರೆ ಹೊರತು, ಯಾರೊಬ್ಬರೂ ಬಜೆಟ್‌ಗೆ ಪೂರಕವಾಗಿ ಸಲಹೆ, ಸೂಚನೆ ನೀಡಲಿಲ್ಲ. ಬದಲಾಗಿ ಬಜೆಟ್ ಪೂರ್ವಭಾವಿ ಸಭೆ ಕುಂದು ಕೊರತೆ ಆಲಿಸುವ ಸಭೆಯಂತಾಗಿತ್ತು.

ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿ ವೀರಭದ್ರಪ್ಪ ಎಂಬುವರು, ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರುತ್ತಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದ್ದು, ಅನೇಕರ ಮೇಲೆ ನಾಯಿಗಳು ದಾಳಿ ಮಾಡಿರುವುದು, ಕಚ್ಚಿ ಗಾಯಗೊಳಿಸಿರುವುದು, ರಸ್ತೆ ಅಪಘಾತಕ್ಕೂ ನಾಯಿಗಳು ಕಾರಣವಾಗುತ್ತಿರುವ ಬಗ್ಗೆ, ಬೀದಿ ದೀಪದ ಸಮಸ್ಯೆ, ಜಲಸಿರಿ ಕಾಮಗಾರಿ ಮಾಡಿ, ಗುಂಡಿಗಳನ್ನು ಮುಚ್ಚದೆ ಬಿಟ್ಟಿರುವ ಕುರಿತು, ಬಡಾವಣೆಯ ಖಾಲಿ ಜಾಗಗಳಲ್ಲಿ ಹಾವುಗಳ, ಹಂದಿಗಳ ವಾಸಸ್ಥಾನ ಆಗಿರುವ ಬಗ್ಗೆ ದೂರಿದರು.

ಮೇಯರ್ ಚಮನ್ ಸಾಬ್ ಮಾತನಾಡಿ, ನಿವೇಶನ ಮಾಲೀಕರು ತಮ್ಮ ಖಾಲಿ ಜಾಗವನ್ನು ಸ್ವಚ್ಛವಾಗಿರಿಸಿಕೊಳ್ಳದಿದ್ದರೆ ಅಂತಹವರಿಗೆ ದಂಡ ವಿಧಿಸಲಾಗುವುದು. ಫೋಟೋ ತೆಗೆದು ದಂಡ ಹಾಕಿ, ಪಾಲಿಕೆಯಿಂದ ಸ್ವಚ್ಛ ಮಾಡಿಸಿ, ಕಂದಾಯವನ್ನೂ ಹೆಚ್ಚಿಸಲಾಗುವುದು ಎಂದರು.

ಈ ಕುರಿತು ನಾಲ್ಕೈದು ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ. 40 ಜನ ಕಾರ್ಮಿಕರನ್ನು ಈ ಕಾರ್ಯಕ್ಕೆ ತೆಗೆದುಕೊಂಡಿದ್ದು, ಪ್ರತಿ ವಾರ್ಡ್‌ಗೆ 4 ಟ್ರ್ಯಾಕ್ಟರ್‌, ಜೆಸಿಬಿ ಮೂಲಕ ರಸ್ತೆಗಳಿಗೆ ಅಡ್ಡವಿರುವ ಮರಳಿನ ಚೀಲ, ಜಲ್ಲಿ ಚೀಲ, ಹೆಂಚುಗಳು ಸೇರಿ ಹಳೆಯ ವಸ್ತುಗಳನ್ನು ತೆರವು ಮಾಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ಪಾಲಿಕೆ ಕೈಗೆತ್ತಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ನಗರದ ನಿವಾಸಿ ಬಿ.ಬಸವರಾಜ ಮಾತನಾಡಿ, ವಿದ್ಯಾರ್ಥಿ ಭವನ ಬಳಿ ಗುಂಡಿ ಬಿದ್ದ ರಸ್ತೆಗಳಿಂದಾಗಿ ನಿತ್ಯ ಅಘಘಾತವಾಗುತ್ತಿವೆ. ಪಾಲಿಕೆ ಎದುರಿನ ರೈಲ್ವೇ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತು, ಸಮಸ್ಯೆಯಾಗುತ್ತಿದೆ. ರಾತ್ರಿ 8 ಗಂಟೆ ನಂತರ ಪಾಲಿಕೆ ಎದುರು ಸಿಟಿ ಬಸ್ಸಿನ ಸೌಲಭ್ಯವನ್ನು ರಾತ್ರಿ 10ರವರೆಗೆ ಸಿಟಿ ಬಸ್ಸಿನ ಸೇವೆ ವಿಸ್ತರಿಸಬೇಕು. ನಗರವನ್ನು ಧೂಳು ಮುಕ್ತ ದಾವಣಗೆರೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಪಾಲಿಕೆ ನಾಮ ನಿರ್ದೇಶಿತ ಸದಸ್ಯ ಎಲ್.ಎಂ.ಎಚ್.ಸಾಗರ್ ಮಾತನಾಡಿ, ಜಿಲ್ಲಾ ಕೇಂದ್ರದ ರಸ್ತೆಗಳು, ಪಾಲಿಕೆ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ, ಶುಲ್ಕ ವಿಧಿಸಬೇಕು. ಬಾತಿ ಕೆರೆ ಪ್ರವಾಸಿ ತಾಣ ಮಾಡಿ, ಬೋಟಿಂಗ್ ವ್ಯವಸ್ಥೆ ಮಾಡಬೇಕು. ಪಾರ್ಕ್‌ಗಳನ್ನು ಸಂಘ-ಸಂಸ್ಥೆಗಳಿಗೆ ನಿರ್ವಹಣೆಗೆ ವಹಿಸಿದರೆ, ಅವು ಅಭಿವೃದ್ಧಿಯಾಗುತ್ತವೆ. ಇದರಿಂದ ಕಾರ್ಮಿಕರ ಕೊರತೆಯೂ ನೀಗಲಿದ್ದು, ಪಾಲಿಕೆಗೂ ಆದಾಯ ಬರುತ್ತದೆ ಎಂದು ತಿಳಿಸಿದರು.

ಈ ವೇಳೆ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ, ಆಶಾ ಉಮೇಶ, ಸುಧಾ ಇಟ್ಟಿಗುಡಿ, ಉರ್ಬಾನ್ ಪಂಡಿತ್‌, ವಿಪಕ್ಷ ನಾಯಕ ಆರ್.ಪ್ರಸನ್ನಕುಮಾರ, ಆಡಳಿತ ಪಕ್ಷದ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ್, ಉಮೇಶ, ಗಣೇಶ ಸೇರಿದಂತೆ ಪಾಲಿಕೆ ಹಿರಿಯ ಅಧಿಕಾರಿ ಪ್ರಿಯಾಂಕಾ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ಸಂಘ-ಸಂಸ್ಥೆ ಪ್ರತಿನಿಧಿಗಳಿದ್ದರು.