ಸಾರಾಂಶ
ಹುಬ್ಬಳ್ಳಿ:
ಯುವ ಕವಿಗಳಲ್ಲಿ ಓದುವ ಹಾಗೂ ಸಹಕವಿಗಳು ಬರೆದ ಕವಿತೆ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಓರ್ವ ಉತ್ತಮ ಕವಿಯಾಗಬೇಕಾದರೆ ಮೊದಲು ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ, ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶರಾವ್ ಹತ್ವಾರ್ (ಜೋಗಿ) ಹೇಳಿದರು.ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಟ್ರಸ್ಟ್‌ನ ಅಡಿ ಜಗದೀಶ ಶೆಟ್ಟರ ದತ್ತಿ ಆಶ್ರಯದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಓರ್ವ ಕವಿ ದೇವರಂತೆ ತನಗೆ ಗೊತ್ತಿಲ್ಲದಂತೆಯೇ ಬೆಳೆಯುತ್ತಾ ಹೋಗುತ್ತಾನೆ. ಯಾವುದೇ ಕವಿತೆಯೊಂದು ಹುಟ್ಟಬೇಕಾದಲ್ಲಿ ಕವಿಯಾದವನು ಅದರ ಮುಂದೆ ಖಾಲಿಯಾಗಿ ನಿಂತರೆ ಮಾತ್ರ ಕವಿತೆ ಕಾಣಲು ಸಾಧ್ಯವಾಗುತ್ತದೆ. ಚಂದಿರನನ್ನು ಒಬ್ಬ ವಿಜ್ಞಾನಿ ನೋಡುವ ರೀತಿಯು ಅದೇ ಚಂದರನ್ನು ಓರ್ವ ಕವಿ ಕಾಣುವ ರೀತಿ ತುಂಬಾ ವ್ಯತ್ಯಾಸವಿದೆ. ಯುವ ಕವಿಗಳಲ್ಲಿ ಓದುವ ಪರಂಪರೆ ಕಡಿಮೆಯಾಗುತ್ತಿದೆ. ನೋಡಿದೆ ಎನ್ನುವ ಮಾತು ಬರುತ್ತದೆ, ಓದಿದೆ ಎಂಬ ಮಾತು ಕಡಿಮೆಯಾಗಿದೆ ಎಂದರು.ಓದುಗರು ಕಾವ್ಯವನ್ನು ಪ್ರೀತಿಸುವಂತೆ ಮಾಡುವುದು ಕವಿಯಾದವನ ಕೆಲಸ. ಇಂದಿನ ಜನತೆ ಜನಪ್ರೀಯತೆ ಎಂಬ ಜಾಡಿನಲ್ಲಿ ಬಿದ್ದು ಎಲ್ಲರೂ ಒಂದೆ ದಾರಿಯಲ್ಲಿ ಸಾಗುತ್ತಿದ್ದಾರೆ. ಕುವೆಂಪು, ಬೇಂದ್ರೆಯಂತಹ ಕವಿಗಳು ಮತ್ತೆ ಬರಬೇಕಿದೆ. ಇಂತಹ ವೇದಿಕೆಗಳ ಮೂಲಕ ಯುವ ಕವಿಗಳೆಂಬ ಹಣತೆಗೆ ಬೆಳಕು ಹಚ್ಚುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಮೂಲಕ ಯುವ ಕವಿಗಳಿಗೆ ಬೆಳಕು ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದರು.
ತೀರ್ಪುಗಾರರ ಪರವಾಗಿ ಚಂದ್ರಶೇಖರ ವಸ್ತ್ರದ ಮಾತನಾಡಿ, ಇಂದಿನ ಯುವಕವಿಗಳಲ್ಲಿ ಹಳೆಗನ್ನಡದ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಕವಿಗಳು ಮೊದಲು ಹಿರಿಯ ಕವಿಗಳ, ಸಾಹಿತಿಗಳ ಬಗ್ಗೆ ಓದುವ ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೆಳಸಿಕೊಳ್ಳಬೇಕು. ತಾವು ರಚಿಸುವ ಕಾವ್ಯದಲ್ಲಿ ಸ್ವಚ್ಛ, ಸುಂದರ ಭಾಷೆಯ ಹಿಡಿತ ಅರಿತಿರಬೇಕು. ಕವಿಗಳ ಕವನಗಳು ಓದುಗರ ಮೂಲಕ ಮಾತನಾಡುವಂತಿರಬೇಕು. ಕಾಯಾ, ವಾಚಾ. ಮನಸ್ಸಿದ್ದರೆ ಮಾತ್ರ ಸುಂದರ ಕವಿತೆ ಹೊರಹೊಮ್ಮಲು ಸಾಧ್ಯ ಎಂದರು.ಹಿರಿಯ ಸಾಹಿತಿ ಶಾಮಸುಂದರ ಬಿದರಕುಂದಿ ಮಾತನಾಡಿ, ಪ್ರಶಸ್ತಿಗಾಗಿ ಬಂದಿರುವ ಕೃತಿಗಳಲ್ಲಿ ಹೆಚ್ಚಾಗಿ ವೈಯಕ್ತಿಕವಾದ, ಪ್ರಚಲಿತ ಕಾಲದ ಅಂಶಗಳ ಮೇಲೆ ರಚಿಸಲಾಗಿರುವ ಕೃತಿಗಳೇ ಹೆಚ್ಚಿವೆ. ಇದನ್ನೆಲ್ಲ ಗಮನಿಸಿದರೆ ನಾನು, ನನ್ನಷ್ಟಕ್ಕೆ ಎಂಬ ವೈಯಕ್ತಿಕ ತೃಪ್ತಿಪಟ್ಟ ಕವನಗಳೆ ಹೆಚ್ಚಾಗಿ ಪ್ರಕಟಗೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಕವಿಗಳು ಅಭ್ಯಾಸ ಮಾಡುವ ಅವಶ್ಯಕತೆಯಿದೆ. ಕವಿಗಳು ಹಿರಿಯ ಕವಿಗಳ, ಸಾಹಿತಿಗಳು ಬರೆದ ಕವಿತೆ, ಕವನಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಎಂ.ಎ. ಸುಬ್ರಹ್ಮಣ್ಯ ಮಾತನಾಡಿ, ಕೋವಿಡ್ ಸೇರಿದಂತೆ ಅನಿವಾರ್ಯ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಿಂದ ಪ್ರಶಸ್ತಿ ನೀಡಿರಲಿಲ್ಲ. ಈ ಬಾರಿ ನಾಲ್ವರು ಕವಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಟ್ರಸ್ಟ್‌ನ ಅಡಿ ಕಳೆದ 2003ರಿಂದ ರಾಜ್ಯಾದ್ಯಂತ ಕವಿಗಳನ್ನು ಆಯ್ಕೆ ಮಾಡಿ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಮಾತನಾಡಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಬಳಿಗಾರ, ವೇದಿಕೆ ಉಪಾಧ್ಯಕ್ಷ ಬಿ.ಎಸ್. ಮಾಳವಾಡ ಸೇರಿದಂತೆ ಹಲವರಿದ್ದರು. ಶಶಿ ಸಾಲಿ ನಿರೂಪಿಸಿದರು. ನಂದಾ ಕುಲಕರ್ಣಿ ವಂದಿಸಿದರು.
ಪ್ರಶಸ್ತಿ ಪ್ರದಾನ:
ಇದೇ ವೇಳೆ 2019ನೇ ಸಾಲಿಗೆ ಮಂಜಿನೊಳಗಣ ಕೆಂಡ ಕೃತಿಗಾಗಿ ಹೆಬಸೂರ ರಮಜಾನ್, 2020ನೇ ಸಾಲಿಗೆ ಸರಹದ್ದುಗಳಿಲ್ಲದ ಭೂಮಿಯ ಕನಸು ಕೃತಿಗಾಗಿ ನಿರ್ಮಲಾ ಶೆಟ್ಟರ್, 2021ನೇ ಸಾಲಿಗೆ ಮನಮದ್ದಳೆಯ ಸ್ವಗತ ಕೃತಿಗಾಗಿ ಶ್ವೇತಾ ನರಗುಂದ ಹಾಗೂ 2022ನೇ ಸಾಲಿಗೆ ಎಂಟು ಬಣ್ಣದ ಕೌದಿ ಕೃತಿಗಾಗಿ ಡಾ. ಶಿವಾನಂದ ಕುಬಸದ ಅವರಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.