ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನೆಮ್ಮದಿ ಎಂಬುದೇ ಇಲ್ಲ. ಸಮುದಾಯದಲ್ಲಿ ಭಯ, ಆತಂಕ ಸೃಷ್ಟಿಸುವಂತಹ ವಾತಾವರಣವಿದೆ. ಇದರಿಂದ ಮಕ್ಕಳು ತಮ್ಮಲ್ಲಿರುವ ಸೃಜನಶೀಲತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ವಿಷಾದಿಸಿದರು.ನಗರದ ಸದ್ವಿದ್ಯಾ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಚಿಣ್ಣರ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಪ್ಪತ್ತರ ದಶಕದ ಶಿಕ್ಷಣ ವ್ಯವಸ್ಥೆಯಲ್ಲಿ ಒತ್ತಡವಿರಲಿಲ್ಲ, ಪೈಪೋಟಿಯೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಕಡಿಮೆ ಅಂಕ ಗಳಿಸಿದವರು ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸುತ್ತಿರಲಿಲ್ಲ. ಆದರೆ, ಓದಿ ವಿದ್ಯಾವಂತರಾಗದಿದ್ದರೂ ಜೀವನದ ಬಗ್ಗೆ ಆತ್ಮಸ್ಥೈರ್ಯವಿತ್ತು. ಅದನ್ನು ನಂಬಿ ಬದುಕನ್ನು ಸಮರ್ಥವಾಗಿ ಕಟ್ಟಿಕೊಳ್ಳುತ್ತಿದ್ದರು ಎಂದು ಹೇಳಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯಕ್ಕಿಂತ ಹೆಚ್ಚಾಗಿ ಆತ್ಮಹತ್ಯೆಯಂತಹ ದೌರ್ಬಲ್ಯಗಳೇ ತುಂಬಿಹೋಗಿವೆ. ಇದಕ್ಕೆ ಶಿಕ್ಷಕರು, ಪೋಷಕರು, ಸಮಾಜ ಕಾರಣವಾಗಿದೆ. ಈ ಮೂರೂ ಮುಂದಿನ ತಲೆಮಾರನ್ನು ಸಂಪೂರ್ಣವಾಗಿ ಹಾಳುಮಾಡುವುದಕ್ಕೆ ತಮಗರಿವಿಲ್ಲದೆ ಪ್ರಯತ್ನಿಸುತ್ತಿರುವಂತೆ ಕಂಡುಬರುತ್ತಿವೆ ಎಂದು ಆತಂಕದಿಂದ ನುಡಿದರು.ಮಕ್ಕಳಿಗೆ ಜನರನ್ನು ಗಮನಿಸುವಂತಹ ಬುದ್ಧಿವಂತಿಕೆ, ಸಾಮಾನ್ಯಜ್ಞಾನವನ್ನು ಅವರ ಮನಸ್ಸಿನಲ್ಲಿ ತುಂಬುವುದಕ್ಕೆ ಪೋಷಕರಾದವರು ಪ್ರಯತ್ನಿಸಬೇಕು. ಗಮನಿಸುವ ಪ್ರಕ್ರಿಯೆಯನ್ನುಶಿಕ್ಷಣ, ಶಿಕ್ಷಕರು, ಪೋಷಕರು ಮಕ್ಕಳಲ್ಲಿ ಬೆಳೆಸದಿದ್ದರೆ ಮಕ್ಕಳು ಕೇವಲ ಕೂಲಿ ಕಾರ್ಮಿಕರಂತೆ, ಗುಲಾಮರಂತೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ರ್‍ಯಾಂಕ್ ಪಡೆದವರಾರೂ ಇಂದು ನಮ್ಮ ಜೊತೆಗಿಲ್ಲ. ಎಲ್ಲರೂ ರ್‍ಯಾಂಕ್ ಬರುವಂತೆ ಒತ್ತಡ ಹಾಕಬೇಡಿ. ಇದರಿಂದ ಮಕ್ಕಳು ಸಂವೇದನಾಶೀಲತೆ, ಪ್ರೀತಿ, ವಿಶ್ವಾಸ, ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು ಬುದ್ಧಿವಂತರ ಜೊತೆಗಷ್ಟೇ ಇರುವುದಕ್ಕೆ ಪ್ರಾಮುಖ್ಯತೆ ನೀಡದೆ ಇತರರ ಜೊತೆಗಿರುವುದಕ್ಕೂ ಅವಕಾಶ ಮಾಡಿಕೊಡಬೇಕು. ಬದುಕಿಗೆ ವಿದ್ಯೆ ಮುಖ್ಯ. ಆದರೆ, ಅದಿಲ್ಲದಿದ್ದರೆ ಬದುಕೇ ಇಲ್ಲ ಎನ್ನುವುದು ಭ್ರಮೆ. ಸಾಮಾನ್ಯ ಜ್ಞಾನದೊಂದಿಗೆ ಮಕ್ಕಳನ್ನು ಸೃಜನಶೀಲರಾಗಿ ಬೆಳೆಸುವುದಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಸದ್ವಿದ್ಯಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಹರೀಶ್‌ಕುಮಾರ್ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ನಿವೃತ್ತ ವಿಷಯ ಪರಿವೀಕ್ಷಕರಾದ ಎಸ್.ಲೋಕೇಶ್, ಸಿ.ಎಲ್.ನಂಜರಾಜು, ಸಂಸ್ಥೆಯ ರತ್ನಶ್ರೀ, ಫಣಿಮಾಲ, ಬಿ.ಎಸ್.ಗೀತಾ. ಬಿ.ಆರ್.ಶುಭಾ ಇದ್ದರು.