ಮತ್ತೊಂದು ಶ್ರದ್ಧಾಕೇಂದ್ರವಾಗಿ ರೂಪುಗೊಂಡ ಯಲ್ಲಾಪುರದ ದತ್ತಮಂದಿರ

| Published : Dec 08 2024, 01:19 AM IST

ಮತ್ತೊಂದು ಶ್ರದ್ಧಾಕೇಂದ್ರವಾಗಿ ರೂಪುಗೊಂಡ ಯಲ್ಲಾಪುರದ ದತ್ತಮಂದಿರ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ಪಟ್ಟಣದ ನಾಯಕನಕೆರೆ ಬಳಿ ಇರುವ ದತ್ತ ಮಂದಿರದ ನೂತನ ಶಿಲಾಮಯ ಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಡಿ. ೧೩, ೧೪, ೧೫ರಂದು ನೆರವೇರಲಿದೆ. ತನ್ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ: ಜಿಲ್ಲೆಯ ಮತ್ತೊಂದು ಶ್ರದ್ಧಾ ಕೇಂದ್ರವಾಗಿ, ಪ್ರವಾಸಿ ತಾಣವಾಗಿ ಇಲ್ಲಿಯ ದತ್ತ ಮಂದಿರ ನಿರ್ಮಾಣವಾಗಿದೆ.

ತೀರಾ ಜೀರ್ಣಾವಸ್ಥೆಯಲ್ಲಿದ್ದ ಗುಡಿಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪದಂತೆ ಅಭಿವೃದ್ಧಿಗೊಳಿಸಿದ್ದು, ನೂತನ ಶಿಲಾಮಯ ಮಂದಿರ ಮತ್ತು ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಡಿ. ೧೩, ೧೪, ೧೫ರಂದು ನೆರವೇರಲಿದೆ. ಸುಮಾರು ನೂರು ವರ್ಷಗಳ ಹಿಂದೆ ತಾಲೂಕಿನ ಹಿತ್ಲಳ್ಳಿಯ ಬ್ರಹ್ಮಾನಂದ ಗಣೇಶ ಯೋಗಿಗಳು ಯಲ್ಲಾಪುರ ಪಟ್ಟಣದ ನಾಯಕನಕೆರೆಯ ತಟದ ಮೇಲ್ಭಾಗದಲ್ಲಿ ದತ್ತಮಂದಿರ ಸ್ಥಾಪಿಸಿದ್ದರು. ಹಲವು ವರ್ಷಗಳ ಆನಂತರ ಶಿರಸಿಯ ಬಪ್ಪನಕೊಡಲಿನ ಶಿವಾನಂದ ಯೋಗಿಗಳು ಇಲ್ಲಿ ಅನೇಕ ವರ್ಷಗಳ ಕಾಲ ನೆಲೆನಿಂತು, ದತ್ತಮಂದಿರಕ್ಕೆ ಕಾಯಕಲ್ಪ ನೀಡಿ, ಭಕ್ತರ ಶ್ರದ್ಧಾಕೇಂದ್ರವನ್ನಾಗಿ ಮಾಡಿದ್ದರು. ಅವರ ನಂತರ ಹಲವು ವರ್ಷ ಮಂದಿರದಲ್ಲಿ ವಿಧ್ಯುಕ್ತವಾದ ಪೂಜೆ, ವಿಧಿ-ವಿಧಾನಗಳು ನಡೆಯುತ್ತ ಬಂದಿದ್ದವು. ರಾಮಚಂದ್ರಾಪುರ ಮಠದ ಶ್ರೀಗಳು ದತ್ತಮಂದಿರ ವಹಿಸಿಕೊಂಡ ಹಲವು ವರ್ಷಗಳ ಆನಂತರ ಪ್ರಸ್ತುತ ಶಿಲಾಮಯ ಮಂದಿರ ನಿರ್ಮಿಸಲಾಗಿದೆ.

ಈ ಗುಡಿಯ ಲೋಕಾರ್ಪಣೆಯ ಸಮಿತಿಯ ಗೌರವಾಧ್ಯಕ್ಷ ಶಾಸಕ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಿ, ಕೋಟಿ ರು. ಅಂದಾಜು ವೆಚ್ಚದಲ್ಲಿ ಭವ್ಯವಾದ ಶಿಲಾಮಯ ಮಂದಿರ ನಿರ್ಮಾಣಗೊಂಡು, ಪ್ರತಿಷ್ಠಾಪನಾ ಮಹೋತ್ಸವಕ್ಕೆ ಭರದ ಸಿದ್ಧತೆಯ ಕಾರ್ಯ ನಡೆಯುತ್ತಿದೆ. ಗುಡಿಯ ಮುಂಭಾಗದಲ್ಲಿ ಸುಂದರವಾದ ಸರೋವರವಿದೆ. ಎಲ್ಲೆಡೆ ಹಸಿರಿನಿಂದ ತುಂಬಿದ ಪರಿಸರದಲ್ಲಿ ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ೬೩ರ ಸಮೀಪದಲ್ಲೇ ಈ ಭವ್ಯ ಗುಡಿ ಪ್ರತಿಷ್ಠಾಪಿಸಲ್ಪಡುತ್ತಿದೆ.

ಶ್ರೀಮಠದ ಸಂಕಲ್ಪದಂತೆ ಇನ್ನೂ ₹೨ ಕೋಟಿ ವೆಚ್ಚದಲ್ಲಿ ಸುಂದರವಾದ ಚಂದ್ರಶಾಲೆ, ಯಾಗಶಾಲೆ, ವಸತಿಗೃಹ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿರುವುದರಿಂದ ಇದೊಂದು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಬೆಂಗಳೂರಿನ ಕದಂಬ ಶಿಲ್ಪಕಲಾ ಸಂಸ್ಥೆಯ ಶಿಲ್ಪಿ ಸತೀಶ ದಾನಗೇರಿ ಈ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ೧೯೮೯ರಲ್ಲಿ ಶಿಲ್ಪಿಗಳಾದ ಸೂರಾಲು ವೆಂಕಟರಮಣ ಭಟ್ಟ ಮತ್ತು ರತ್ನಾ ಟಿ.ಎನ್. ದಂಪತಿ ಸ್ಥಾಪಿಸಿದ ಈ ಸಂಸ್ಥೆ ಇಂತಹ ಕಟ್ಟಡ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಒಳಗೊಂಡಂತೆ ವಿವಿಧ ಕಲಾ ಪ್ರಕಾರಗಳನ್ನು ಕೆತ್ತಿದ, ಅನೇಕ ವೈಯಕ್ತಿಕ ಶಿಲ್ಪಿಗಳನ್ನು ರಚಿಸಿದ ಕೀರ್ತಿ ಕದಂಬ ಶಿಲ್ಪಕಲಾ ಸಂಸ್ಥೆಯದ್ದಾಗಿದೆ. ೭೫೦ ವರ್ಷಗಳ ಆನಂತರ ಹೊಯ್ಸಳ ಶೈಲಿಯ ದೇವಾಲಯವೊಂದನ್ನು ನಿರ್ಮಿಸಿದ ದಾಖಲೆ ಕದಂಬ ಸಂಸ್ಥೆ ಹೊಂದಿದೆ. ಈ ಸಂಸ್ಥೆ ವಿವಿಧ ದೇಶಗಳಲ್ಲಿ ಅನೇಕ ವಿಗ್ರಹಗಳನ್ನು ಸ್ಥಾಪಿಸಿದೆ.