ಪ್ರಶ್ನೆಪತ್ರಿಕೆಯ ನೀಲಿ ನಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಪರಿಹಾರ ಬೋಧನಾ ತರಗತಿ ನಡೆಸುವುದರೊಂದಿಗೆ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಗಣಿತಶಾಸ್ತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಉಪನ್ಯಾಸಕರ ಉತ್ತಮ ಮಾರ್ಗದರ್ಶನ ಅತ್ಯಗತ್ಯ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ತಿಳಿಸಿದರು.

ನಗರದ ವಿಜಯ ವಿಠ್ಠಲ ಪಿಯು ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಮೈಸೂರು ಜಿಲ್ಲಾ ಪದವಿಪೂರ್ವ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆ ಸಂಯುಕ್ತವಾಗಿ ಜಿಲ್ಲೆಯ ಗಣಿತಶಾಸ್ತ್ರ ಉಪನ್ಯಾಸಕರಿಗೆ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ, ಗಣಿತಶಾಸ್ತ್ರ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಶ್ನೆಪತ್ರಿಕೆಯ ನೀಲಿ ನಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಪರಿಹಾರ ಬೋಧನಾ ತರಗತಿ ನಡೆಸುವುದರೊಂದಿಗೆ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಇದರಿಂದ ಗಣಿತ ವಿಷಯದಲ್ಲಿ ನಮ್ಮ ಜಿಲ್ಲೆಯು ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದು ಹೇಳಿದರು.

ಎಂಐಟಿ ಕಾಲೇಜಿನ ಪ್ರಾಂಶುಪಾಲ ವೈ.ಟಿ. ಕೃಷ್ಣೇಗೌಡ ಮಾತನಾಡಿ, ಗಣಿತಶಾಸ್ತ್ರವು ತರ್ಕ, ಕ್ರಮ, ಕಲ್ಪನೆ, ನಿಖರತೆ ಮತ್ತು ಸೃಜನಶೀಲತೆಗಳ ಅದ್ಭುತ ಸಂಯೋಜನೆಯಾಗಿದ್ದು, ಮಾನವನ ಪ್ರಗತಿಯ ಪ್ರತಿಯೊಂದು ಹಂತದಲ್ಲೂ ಗಣಿತಶಾಸ್ತ್ರದ ಕೊಡುಗೆ ಇದೆ ಎಂದರು.

ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ರೋಬೋಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಗಣಿತಶಾಸ್ತ್ರದ ಜ್ಞಾನವು ಅತ್ಯವಶ್ಯಕ. ವಿದ್ಯಾರ್ಥಿಗಳು ಗಣಿತವನ್ನು ಕಠಿಣವಾದ ವಿಷಯವೆಂಬ ಭಯವನ್ನು ಹೋಗಲಾಡಿಸಿ, ಆತ್ಮವಿಶ್ವಾಸದಿಂದ ಗಣಿತಶಾಸ್ತ್ರದ ಮೂಲ ಪರಿಕಲ್ಪನೆಯನ್ನು ಗ್ರಹಿಸಬೇಕು ಎಂದು ಹೇಳಿದರು.

ಗಣಿತವನ್ನು ಕೇವಲ ಪರೀಕ್ಷಾ ದೃಷ್ಟಿಯಿಂದ ಅಭ್ಯಾಸ ಮಾಡದೆ ತರ್ಕಬದ್ಧ ಚಿಂತನೆ, ಸಮಸ್ಯೆ ಪರಿಹಾರಕ್ಕೆ ಬಳಸುವಂತಾಗಬೇಕು. ಗಣಿತವನ್ನು ಜೀವಂತ, ಸುಲಭ, ಆಸಕ್ತಿದಾಯಕವಾಗಿ ಬೋಧಿಸುವ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿರುವ ಉಪನ್ಯಾಸಕರನ್ನು ಅವರು ಅಭಿನಂದಿಸಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲೆಯ 120 ಹೆಚ್ಚು ಉಪನ್ಯಾಸಕರು ಭಾಗವಹಿಸಿದ್ದರು. ವಿಜಯ ವಿಠಲ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಂಶುಪಾಲರಾದ ಟಿ.ಸಿ. ಸುದೀಪ್, ರವಿಶಂಕರ್, ಉದಯಶಂಕರ್, ಎಂ.ಆರ್. ರಾಜೇಶ್, ಸುಶೀಲಾ, ಕರಿಗೌಡ, ಟಿ.ಕೆ. ಚಂದ್ರಶೇಖರ್ ಇದ್ದರು. ವಿ. ಶಾರದಾ ಪ್ರಾರ್ಥಿಸಿದರು. ಗಣಿತಶಾಸ್ತ್ರ ವೇದಿಕೆ ಅಧ್ಯಕ್ಷ ಮಂಜೇಗೌಡ ಸ್ವಾಗತಿಸಿದರು. ಎಸ್.ವಿ. ಸೂರ್ಯಕುಮಾರ್ ವಂದಿಸಿದರು. ಜಯಲಕ್ಷ್ಮೀ ನಿರೂಪಿಸಿದರು.