ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಯಲ್ಲಾಪುರ ಗ್ರಾಮದೇವಿಯರ ಜಾತ್ರೆ ಈ ಬಾರಿ ಫೆ.೧೧ರಿಂದ ೧೯ ರವರೆಗೆ ನಡೆಯಲಿದೆ.
ಫೆ.೧೧ರಿಂದ ೧೯ರವರೆಗೆ ಅದ್ಧೂರಿ ಜಾತ್ರೆ । ತೊಂದರೆ ಆಗದಂತೆ ಕಾರ್ಯನಿರ್ವಹಿಸಿ: ಶಾಸಕ ಹೆಬ್ಬಾರ
ಕನ್ನಡಪ್ರಭ ವಾರ್ತೆ ಯಲ್ಲಾಪುರಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಯಲ್ಲಾಪುರ ಗ್ರಾಮದೇವಿಯರ ಜಾತ್ರೆ ಈ ಬಾರಿ ಫೆ.೧೧ರಿಂದ ೧೯ ರವರೆಗೆ ನಡೆಯಲಿದೆ. ಅದಕ್ಕೆ ಸಾರ್ವಜನಿಕರ, ಸಂಘ-ಸಂಸ್ಥೆಗಳ, ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಹಕಾರ ಪಡೆದು, ತಾಲೂಕಿಗೆ ಮತ್ತು ಜಾತ್ರೆಗೆ ಗೌರವ ತರುವಂತೆ ಕೆಲಸ ಮಾಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಸೋಮವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಪರಿಣಾಮ ಬೈಪಾಸ್ ಇಲ್ಲದೇ ಇರುವ ಕಾರಣಕ್ಕೆ ಸಂಚಾರ ನಿಯಮಕ್ಕೆ ಪೊಲೀಸರಿಗೆ ಅತಿ ಹೆಚ್ಚಿನ ಹೊಣೆಗಾರಿಕೆ ಇದೆ. ಅದನ್ನು ಅತ್ಯಂತ ವ್ಯವಸ್ಥಿತವಾಗಿ ಪೊಲೀಸ್ ಇಲಾಖೆ ನಿರ್ವಹಿಸಬೇಕಾಗಿದೆ. ಆರಂಭದ ಮತ್ತು ಕೊನೆಯ ದಿನ ೨೫-೩೦ ಸಾವಿರ ಜನರ ಸೇರುತ್ತಾರೆ. ಎಲ್ಲಿಯೂ ಯಾವುದೇ ರೀತಿ ಅವಘಡ, ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು. ಇದು ಯಾವುದೇ ರಾಜಕೀಯ ಪಕ್ಷದ ಜಾತ್ರೆಯಲ್ಲ, ಸಮಾಜದ ಜಾತ್ರೆ. ಅದು ಯಶಸ್ವಿಯಾಗಬೇಕು ಎಂದರು.
ಹೆಚ್ಚುವರಿಯಾಗಿ ಮೊಬೈಲ್ ಶೌಚಗೃಹಗಳ ವ್ಯವಸ್ಥೆ ಮಾಡಿಕೊಡಬೇಕು. ಫೆ.೮ ರಿಂದ ೨೨ ರವರೆಗೆ ಪ್ರತಿನಿತ್ಯ ಕುಡಿಯುವ ನೀರಿನ ಸರಬರಾಜು ಮಾಡಿ, ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕೆಂದರು.ಆರೋಗ್ಯ ಇಲಾಖೆಯವರು ತುರ್ತು ಚಿಕಿತ್ಸೆಗೆ ತಾತ್ಕಾಲಿಕ ಘಟಕ ರಚಿಸಿ, ಅಗತ್ಯ ಸಿಬ್ಬಂದಿ ಹಾಗೂ ವ್ಯವಸ್ಥೆ ಸಿದ್ಧತೆಯಲ್ಲಿರಬೇಕು. ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದ ಶಾಸಕರು, ಅಗ್ನಿಶಾಮಕ, ಶೌಚಾಲಯ, ಬೀದಿದೀಪಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.
ಗ್ರಾಮೀಣ ಭಾಗಗಳಿಗೆ ಅಗತ್ಯವಿರುವಲ್ಲಿ ವಿಶೇಷ ಬಸ್ ಓಡಿಸಬೇಕು. ಹೆಚ್ಚುವರಿ ಬಸ್‌ಗಳ ಅಗತ್ಯವಿದ್ದರೆ ಹೊರಗಿನಿಂದ ತರಿಸಿಕೊಳ್ಳುವಂತೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು. ಅಮ್ಯೂಸ್‌ಮೆಂಟ್ ಪಾರ್ಕ್, ಮನರಂಜನೆ ವಿಚಾರದಲ್ಲಿ ಜನರಿಗೆ ತೊಂದರೆಯಾಗದಂತೆ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಜ. ೩ರಂದು ಮುಂದಿನ ಹಂತದ ಸಿದ್ಧತೆ ಬಗ್ಗೆ ಪಪಂಯಲ್ಲಿ ಸಭೆ ನಡೆಸಲಾಗುವುದೆಂದರು.ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಮಾತನಾಡಿ, ಫುಟ್ ಪಾತ್ ಮೇಲಿನ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ, ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗುವುದು. ಈ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬೇಡಿ ಎಂದು ವಿನಂತಿಸಿದರು.
ಸಿಪಿಐ ರಮೇಶ ಹಾನಾಪುರ ಮಾತನಾಡಿ, ಜಾತ್ರೆಯಲ್ಲಿ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ ಎಂದರು.ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಡಿವೈಎಸ್ಪಿ ಗೀತಾ ಪಾಟೀಲ, ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ರವಿ ಶಾನಭಾಗ, ಎಂ.ಆರ್. ಹೆಗಡೆ, ಗಜಾನನ ನಾಯ್ಕ, ಭವ್ಯಾ ಶೆಟ್ಟಿ, ಶಿರೀಷ ಪ್ರಭು, ರಾಮು ನಾಯ್ಕ, ನಾರಾಯಣ ನಾಯಕ, ರಾಧಾಕೃಷ್ಣ ನಾಯ್ಕ, ಸೋಮೇಶ್ವರ ನಾಯ್ಕ, ಸಂತೋಷ ನಾಯ್ಕ, ಸೂರಜ ಹೆಗಡೆ, ಪ್ರಸಾದ ಹೆಗಡೆ, ಸತ್ಯ ನಾಯರ್, ನರಸಿಂಹ ಬೋಳಪಾಲ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ರೇವಣಕರ್, ಶ್ಯಾಮಿಲಿ ಪಾಟಣಕರ್ ಇತರರು ಸಲಹೆ ನೀಡಿದರು.
ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಸ್ವಾಗತಿಸಿ, ಸಿಬ್ಬಂದಿ ಹೇಮಾವತಿ ಭಟ್ಟ ನಿರ್ವಹಿಸಿದರು.