ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಗಡಿನಾಡು ಉತ್ಸವ ಕಾರ್ಯಕ್ರಮ ಆಯೋಜಿಸುವ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ನೇತೃತ್ವದಲ್ಲಿ ಪೂರ್ವಸಭೆ ನಡೆಸಲಾಯಿತು.ಜಿಲ್ಲೆಯ ಸುಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಿಂದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸರ್ಕಾರಿ ನೌಕರರು ಆಗಮಿಸುವುದರಿಂದ ಅಗತ್ಯವಾದ ವಸತಿ ಊಟ ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ದೇವಸ್ಥಾನದಲ್ಲಿ ಜನಸಂದಣಿ ಇಲ್ಲದ ದಿನವನ್ನು ಆಯ್ಕೆ ಮಾಡಿಕೊಂಡು ಆ ದಿನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಸಚಿವರು ಮತ್ತು ಶಾಸಕರ ಸಲಹೆ ಸೂಚನೆ ಮಾರ್ಗದರ್ಶನ ಪಡೆಯುವಂತೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜ್ಯ ಸಂಘದ ವತಿಯಿಂದ ಕಳೆದ ಬಾರಿ ರಾಯಚೂರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ನಮ್ಮ ಜಿಲ್ಲೆಗೆ ಈ ಭಾಗ್ಯ ದೊರೆತಿದ್ದು ಮಹದೇಶ್ವರ ಸನ್ನಿಧಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ರಾಜ್ಯಾಧ್ಯಕ್ಷ ಷಡಕ್ಷರಿ ರವರು ಸೂಚಿಸಿದ್ದು ನಮಗೂ ಕೂಡ ಸೌಭಾಗ್ಯ ಎಂದು ಭಾವಿಸಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಪ್ರಾಧಿಕಾರದ ಕಾರ್ಯದರ್ಶಿಗಳ ಸಹಕಾರ ಮಾರ್ಗದರ್ಶನವನ್ನು ಕೋರಿದರು.ತಾಲೂಕು ಘಟಕದ ಅಧ್ಯಕ್ಷ ಗುರುಸ್ವಾಮಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬರಲು ಅಗತ್ಯ ಸಹಕಾರ ಮತ್ತು ಜವಾಬ್ದಾರಿಯನ್ನು ಹನೂರು ತಾಲೂಕು ಘಟಕ ನಿರ್ವಹಿಸಬಲ್ಲದು ಎಂಬ ಭರವಸೆಯನ್ನು ನೀಡಿದರಲ್ಲದೇ, ಬಹುತೇಕ ಕಾಡಂಚಿನಿಂದ ಕೂಡಿದ ಹನೂರು ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಅಧ್ಯಕ್ಷರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮ ಆಯೋಜನೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸಭೆಗೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಸವಿವರವಾಗಿ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕ್ರೀಡಾ ಕಾರ್ಯದರ್ಶಿ ರಕ್ಷಿತ್, ತಾಲೂಕು ಘಟಕದ ನಿಯೋಜಿತ ಕಾರ್ಯದರ್ಶಿ ಹಾಗೂ ಖಜಾಂಚಿ ಚಂದ್ರಶೇಖರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಸಂಘಟನಾ ಕಾರ್ಯದರ್ಶಿ ಪ್ರೀತಂ ಹಾಗೂ ನಾಮ ನಿರ್ದೇಶಿತ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ನಿಕಟ ಪೂರ್ವ ಹನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಶ್ರೀನಿವಾಸ ನಾಯ್ಡು ಹಾಜರಿದ್ದರು.