ಸಾರಾಂಶ
ಧಾರವಾಡ: ಹು-ಧಾ ಅವಳಿನಗರ ಸೇರಿದಂತೆ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ರುದ್ರನರ್ತನ ಮುಂದುವರಿದಿದ್ದು, ಧಾರವಾಡ ಭಾಗದಲ್ಲಿ ಮಳೆಗಿಂತ ಗಾಳಿ ಅಬ್ಬರವೇ ಹೆಚ್ಚಿದ್ದು, ಅಪಾಯದ ಸ್ಥಿತಿ ಸೃಷ್ಟಿಸುತ್ತಿದೆ.
ಕಳೆದ ಎರಡು ದಿನಗಳಿಂದ ಧಾರವಾಡ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಳೆ ಪ್ರಮಾಣ ಅಷ್ಟೇನು ಇಲ್ಲ. ಆದರೆ ಸಿಡಿಲು, ಮಿಂಚು, ಗಾಳಿ ಜನರ ನಿದ್ರೆಗೆಡಿಸಿದೆ. ಶುಕ್ರವಾರ ಧಾರವಾಡ ತಾಲೂಕಿನ ಲೋಕೂರು ಗ್ರಾಮದಲ್ಲಿ ಮಳೆಗಾಳಿಗೆ ಮರವೊಂದು ಮನೆಯ ಮೇಲೆ ಬಿದ್ದಿದ್ದು, ಘಟನೆಯಲ್ಲಿ ಮಗು ಗಾಯಗೊಂಡಿದೆ.ಲೋಕೂರು ಗ್ರಾಮದ ಈರಪ್ಪ ಗೋಕಾವಿ ಎಂಬುವವರಿಗೆ ಸೇರಿದ ಮನೆಯ ಮೇಲೆ ನೀರಲು ಮರ ಮುರಿದು ಬಿದ್ದಿದೆ. ಇದರಿಂದ ಮನೆ ಹೆಂಚುಗಳು ತುಂಡುತುಂಡಾಗಿ ಬಿದ್ದುಕೊಂಡಿದ್ದು, ಮೂರು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಅದೇ ರೀತಿ ಧಾರವಾಡ ಸರ್ಕಿಟ್‌ಹೌಸ್‌ನಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿ ಉರಿದಿದ್ದು, ಪಕ್ಕದಲ್ಲಿದ್ದ ಜನರೇಟರ್ ಯಂತ್ರ ಹಾನಿಗೊಳಗಾಗಿದೆ.
ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಹಾನಿ:ಅದೇ ರೀತಿ ಗುರುವಾರ ರಾತ್ರಿ ಸುರಿದ ಮಳೆಗೆ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ತಗಡಿನ ಸೆಡ್ಡು ಸಂಪೂರ್ಣ ಹಾನಿಗೊಳಗಾಗಿದೆ. ಗ್ರಾಮದ ಅಯ್ಯಪ್ಪಸ್ವಾಮಿ ಭಕ್ತರು ಸೇರಿಕೊಂಡು ಆರು ನಾಲ್ಕು ತಿಂಗಳ ಹಿಂದಷ್ಟೇ ಈ ಸೆಡ್ ನಿರ್ಮಿಸಿಕೊಂಡಿದ್ದರು. ಮಳೆಗಾಳಿಗೆ ಸೆಡ್‌ನ ತಗಡುಗಳು ಹಾರಿಹೋಗಿವೆ. ಅದೃಷ್ಟವಶಾತಃ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.