ಮುಂಗಾರು ಪೂರ್ವ ಮಳೆ: ಹೊಲಗಳತ್ತ ರೈತರ ಚಿತ್ತ

| Published : May 27 2024, 01:05 AM IST

ಸಾರಾಂಶ

ಜಿಲ್ಲೆಯಲ್ಲಿ ಒಂದು ವಾರದಿಂದ ಅಲ್ಲಲ್ಲಿ ಜೋರಾಗಿಯೇ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆ, ಮೋಡ ಕವಿದ ವಾತಾವರಣ ಸುಡು ಬಿಸಿಲಿನಿಂದಾಗಿ ಬಯಲು ಸೀಮೆಯಂತಾಗಿದ್ದ ಮಲೆನಾಡಿನ ಚಿತ್ರವನ್ನೇ ಬದಲಾಯಿಸಿದೆ. ಇನ್ನೂ ಜಿಲ್ಲೆಯಲ್ಲಿ ಮುಂಗಾರಿಗೂ ಮೊದಲೇ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ರೈತರು ಹೊಲ-ಗದ್ದೆಗಳತ್ತ ಮುಖ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಕಾದಿರುವ ಭೂಮಿಗೆ ಮಳೆ ಬೀಳುತ್ತಿದ್ದಂತೆ ಭೂಮಿ ಹದಗೊಳಿಸಿ, ಬಿತ್ತನೆಗೆ ಹಣಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

10 ದಿನಗಳ ಮುನ್ನ ಬಿರು ಬಿಸಿಲಿನಿಂದ ಕೆಂಗಟ್ಟಿದ್ದ ಜಿಲ್ಲೆಗೆ ಮುಂಗಾರು ಪೂರ್ವ ಮಳೆ ತಂಪೆರೆದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ಹಸಿಯಾಗಿದ್ದು, ರೈತರು ಜಮೀನುಗಳ ಹದ ಮಾಡಿಕೊಂಡು ಬಿತ್ತನೆ ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಒಂದು ವಾರದಿಂದ ಅಲ್ಲಲ್ಲಿ ಜೋರಾಗಿಯೇ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸತತವಾಗಿ ಸುರಿಯುತ್ತಿರುವ ಮಳೆ, ಮೋಡ ಕವಿದ ವಾತಾವರಣ ಸುಡು ಬಿಸಿಲಿನಿಂದಾಗಿ ಬಯಲು ಸೀಮೆಯಂತಾಗಿದ್ದ ಮಲೆನಾಡಿನ ಚಿತ್ರವನ್ನೇ ಬದಲಾಯಿಸಿದೆ. ಇನ್ನೂ ಜಿಲ್ಲೆಯಲ್ಲಿ ಮುಂಗಾರಿಗೂ ಮೊದಲೇ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ರೈತರು ಹೊಲ-ಗದ್ದೆಗಳತ್ತ ಮುಖ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಕಾದಿರುವ ಭೂಮಿಗೆ ಮಳೆ ಬೀಳುತ್ತಿದ್ದಂತೆ ಭೂಮಿ ಹದಗೊಳಿಸಿ, ಬಿತ್ತನೆಗೆ ಹಣಿ ಮಾಡುತ್ತಿದ್ದಾರೆ.

ಕಳೆದ 10 ದಿನಗಳಲ್ಲಿ ಅಲ್ಲಿಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ ನೀರಿಲ್ಲದೆ ಬತ್ತಿದ್ದ ಸಣ್ಣ-ಪುಟ್ಟ ಕೆರೆಗಳಲ್ಲಿ ನೀರು ತುಂಬಿಕೊಂಡಿದೆ. ಹೊಲ ಗದ್ದೆಗಳು ಹಸಿಯಾಗಿರುವುದರಿಂದ ಬಹುತೇಕ ಕಡೆ ರೈತರು ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳುವಲ್ಲಿ ಆಸಕ್ತಿ ತೋರಿದ್ದಾರೆ. ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆ ಇರುವುದರಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಳ್ಳುತ್ತಿದ್ದು, ಕೃಷಿ ಇಲಾಖೆಯೂ ಈ ಬಾರಿ ನಿಗದಿತ ಗುರಿ ತಲುಪಲು ಸಜ್ಜಾಗಿದೆ.

ಕಳೆದ ಬಾರಿ ಮಳೆ ಕೊರತೆ ಎದುರಿಸಿದ್ದ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲೇ ಉತ್ತಮ ಮಳೆ ಸುರಿದಿದೆ. ಕಳೆದ 7 ದಿನದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮೇ 20ರಿಂದ 26ರವರೆಗೆ ಜಿಲ್ಲೆಯಲ್ಲಿ 21 ಮಿ.ಮೀ. ಮಳೆಯಾಗಬೇಕಿತ್ತು. 66 ಮಿ.ಮೀ. ಮಳೆ ಸುರಿದಿದೆ.

ಭದ್ರಾವತಿಯಲ್ಲಿ 70.8 ಮಿ.ಮೀ, ಹೊಸನಗರ86.2 ಮಿ.ಮೀ, ಸಾಗರ 56.2 ಮಿ.ಮೀ, ಶಿಕಾರಿಪುರ 42.9 ಮಿ.ಮೀ, ಶಿವಮೊಗ್ಗ 76.2 ಮಿ.ಮೀ, ಸೊರಬ 42.4 ಮಿ.ಮೀ, ತೀರ್ಥಹಳ್ಳಿ 86.7 ಮಿ.ಮೀ. ಮಳೆಯಾಗಿದೆ. ಮೇ 1ರಿಂದ 26ರವರೆಗೆ 133 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ರೈತರಯ ಬೀಜ ಬಿತ್ತನೆಗಾಗಿ ಹೊಲವನ್ನು ಹದ ಮಾಡಿಕೊಳ್ಳುತ್ತಿದ್ದಾರೆ.

1,22,495 ಹೆಕ್ಟೇರ್‌ ಬಿತ್ತನೆ ಗುರಿ:

ಜಿಲ್ಲೆಯಲ್ಲಿ ಕಳೆದ ಬಾರಿ ಮಳೆ ಕೊರತೆಯ ನಡುವೆಯೂ 1,18,354 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆ ಇದ್ದು, 1,22,495 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ನಿಗದಿಪಡಿಸಿದೆ. ಇದರಲ್ಲಿ ಭತ್ತ (73850 ಹೆಕ್ಟೇರ್‌), ಮೆಕ್ಕೆಜೋಳ (46700 ಹೆಕ್ಟೇರ್‌)ವನ್ನು 1,20,590 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಮುಂಗಾರು ಪೂರ್ವ ಅಬ್ಬರಕ್ಕೆ ಹಾನಿ

ಕಳೆದ 10 ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆಗೆ ಜಿಲ್ಲೆಯಲ್ಲಿ 259 ಮನೆಗಳು ಜಲಾವೃತಗೊಂಡಿವೆ. ಕಾಶಿಪುರ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ 9 ಮನೆಗಳಿಗೆ ನೀರು ನುಗ್ಗಿದೆ. ನಗರದ ಆರ್‌ಎಂಎಲ್ ನಗರ ಮತ್ತು ಬಾಪೂಜಿನಗರದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಿದ್ದೇಶ್ವರ ನಗರ ಕ್ರಾಸ್15 ಮನೆಗಳಲ್ಲಿ ನೀರು ನುಗ್ಗಿದೆ. ವಿದ್ಯಾನಗರ, ಜೆಪಿ ನಗರ, ಶಿವಮೊಗ್ಗ ತಾಲೂಕಿನ ಚಿಕ್ಕದಾವನಂದಿ, ಬಿಕ್ಕೋನಹಳ್ಳಿ ತಾಲಾ ಒಂದು ಮನೆಗಳು ಭಾಗಶಃ ಹಾನಿಯಾಗಿವೆ.

--------------------------------