ಸಾರಾಂಶ
ಅಂಗನವಾಡಿ ಕಾರ್ಯಕರ್ತೆಯರಿಗೆ ಐದನೇ ಹಂತದ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲಬುರ್ಗಾಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲಾಪೂರ್ವ ಶಿಕ್ಷಣ ಭದ್ರ ಬುನಾದಿಯಾಗಿದೆ ಎಂದು ತಹಸೀಲ್ದಾರ ಬಸವರಾಜ ತೆನ್ನಹಳ್ಳಿ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಜಿಪಂ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಡೆದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಐದನೇ ಹಂತದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆಯರು ಶಾಲಾ ಪೂರ್ವ ಶಿಕ್ಷಣದ ತರಬೇತಿ ಪಡೆದುಕೊಂಡು ೩ರಿಂದ ೬ ವರ್ಷದ ಮಕ್ಕಳಿಗೆ ಆಟ ಹಾಗೂ ಪಾಠದ ಮೂಲಕ ಮಕ್ಕಳಿಗೆ ಬೋಧನೆ ಮಾಡಬೇಕು. ಕಲಿಕೆಗೆ ಬೇಕಾದ ಎಲ್ಲ ರೀತಿಯ ಸ್ಥಳೀಯವಾಗಿ ದೊರೆಯುವಂತಹ ಬೋಧನಾ ಸಾಮಗ್ರಿ ತಯಾರಿಸಿಕೊಂಡು ಮಕ್ಕಳ ಕಲಿಕೆಯ ಚಟುವಟಿಕೆ, ಕ್ಯಾಲೆಂಡರ್ ಸಂಖ್ಯೆ, ಎಣಿಕೆ, ಶಬ್ದ ಆಟ, ಗಣಿತ ಪೂರ್ವ ತಯಾರಿ ಓದುವ ತಯಾರಿ ಸಂಗೀತ, ನಾಟ್ಯ, ಕಥೆ, ಭಾಷೆ, ಆಟಗಳು, ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಸುವುದು ಮಕ್ಕಳಿಗೆ ಶಿಸ್ತು, ಸಂಯಮ, ಹೊಂದಾಣಿಕೆ ನಾಯಕತ್ವ ಮನೋಭಾವವನ್ನು ಮಕ್ಕಳಿಗೆ ಮೂಡಿಸುವ ಜತೆಗೆ ಮಕ್ಕಳ ಸಾಮಾಜಿಕ, ಬೌದ್ಧಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆಗೆ ಶಕ್ತಿಮೀರಿ ಶ್ರಮಿಸಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೆಕೊಪ್ಪ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜಿಲ್ಲೆ ಹಾಗೂ ತಾಲೂಕಿನ ಶಾಲಾಪೂರ್ವ ಮಾದರಿ ಆಗಿದೆ. ಕಳೆದ ೬ ತಿಂಗಳುಗಳಿಂದ ನಮ್ಮ ತಾಲೂಕಿಗೆ ನಾಲ್ಕು ರಾಜ್ಯದ ತಂಡಗಳು ತಾಲೂಕಿನಲ್ಲಿ ನಡೆಯುತ್ತಿರುವ ಶಾಲಾಪೂರ್ವ ಶಿಕ್ಷಣ ಅಧ್ಯಯನ ಮಾಡಿ ಇಲ್ಲಿಯ ಪೂರ್ವ ಶಿಕ್ಷಣ ನೋಡಿಕೊಂಡು ಇಡೀ ದೇಶಕ್ಕೆ ಇಲ್ಲಿಯ ಶಾಲಾ ಪೂರ್ವ ಶಿಕ್ಷಣ ಮಾದರಿ ಆಗಿದೆ ಎಂದು ನಾಲ್ಕು ರಾಜ್ಯಗಳ ತಂಡ ಹೇಳಿರುವುದು ತೃಪ್ತಿ ತಂದಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ಲಲಿತಾ ನಾಯಕ್, ಮಾದವಿ ವೈದ್ಯ, ಶಿವಪುತ್ರಮ್ಮ ಅಂಗಡಿ ಸೇರಿದಂತೆ ಬನ್ನಿಕೊಪ್ಪ, ಚಿಕ್ಕೇನಕೊಪ್ಪದ ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯಲ್ಲಿದ್ದರು.