ಸಾರಾಂಶ
ಧಾರವಾಡ:
ಮಳೆಗಾಲ ಸಮೀಪಿತ್ತಿದ್ದು, ಎಲ್ಲೆಂದರಲ್ಲಿ ನೀರು ನಿಲ್ಲುವುದು ಹಾಗೂ ಕೊಳಚೆಯಿಂದ ವಿವಿಧ ಜಾತಿಯ ಸೊಳ್ಳೆಗಳು ಹುಟ್ಟಿ ಅನೇಕ ಸಾಂಕ್ರಾಮಿಕ ರೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸೊಳ್ಳೆಗಳ ಮೂಲಕ ಹರಡುವ ರೋಗಗಳು ಬಂದ ನಂತರ ನಿಯಂತ್ರಿಸುವ ಮೊದಲು ಮುಂಜಾಗೃತಾ ಕ್ರಮಕೈಗೊಳ್ಳಲು ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.ಸೊಳ್ಳೆಗಳ ಮೂಲಕ ಹರಡುವ ರೋಗಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಕೀಟಜನ್ಯ ರೋಗಗಳ ಕುರಿತು ಮಾಧ್ಯಮ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡಿದರು.ಡೆಂಘೀ, ಚಿಕೂನ್ ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ ಈ ವರ್ಷವೂ ಮರಕಳಿಸುವ ಸಾಧ್ಯತೆ ಇದೆ. ಈ ರೋಗಗಳ ದುಷ್ಪರಿಣಾಮ ತಡೆಯಲು ಮುಂಜಾಗೃತಾ ಕ್ರಮಕೈಗೊಳ್ಳಬೇಕು. ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಡೆಂಘೀ, ಚಿಕೂನ್ ಗುನ್ಯಾ ಹರಡುವ ಸೊಳ್ಳೆಗಳ ಲಾರ್ವಾ ಸಂಗ್ರಹಿಸಿ ವಿವಿಧ ಪ್ರದೇಶಗಳಲ್ಲಿರುವ ಸೊಳ್ಳೆ ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದೆ. ಈ ಕಾರ್ಯ ನಿರಂತರವಾಗಿರಲು ಜನರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಹೇಳಿದರು.
ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಡೆಂಘೀ, ಚಿಕೂನ್ ಗುನ್ಯಾ ನಿಯಂತ್ರಣ ಕ್ರಮ ತೀವ್ರಗೊಳಿಸಲಾಗುತ್ತಿದೆ. ಕೆರೆ, ಹಳ್ಳ-ಕೊಳ್ಳ, ಬಾವಿ ಮುಂತಾದ ನಿಂತ ನೀರುಗಳ ತಾಣಗಳಿಗೆ ಗಪ್ಪಿ ಮತ್ತು ಗ್ಯಾಂಬೂಸಿಯಾ ಎಂಬ ಲಾರ್ವಾ ಮೀನು ಬಿಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಡಾ. ಟಿ.ಪಿ. ಮಂಜುನಾಥ ಮಾಹಿತಿ ನೀಡಿದರು.ಆರೋಗ್ಯ ಇಲಾಖೆ ವಿವಿಧ ವಿಭಾಗಗಳ ಅಧಿಕಾರಿಗಳಾ ಡಾ. ಎಸ್. ಮಂಜುನಾಥ, ಡಾ. ತನುಜಾ, ಮಹೇಶ ಹತ್ತರಗಿ, ಡಾ. ರಾಜೇಂದ್ರ, ಡಾ. ಕರ್ಪೂರಮಠ, ಡಾ. ಪಾರ್ತೋಟ ಮತ್ತಿತರರು ಇದ್ದರು. ಬಾಕ್ಸ್...
ಝಿರೋ ಮಲೇರಿಯಾ ಪ್ರಕರಣಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಸೊಳ್ಳೆಯಿಂದ ಹರಡುವ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ಪೈಕಿ ಡೆಂಘೀ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. 2019ರಿಂದಲೇ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದ್ದು, ಐದು ವರ್ಷಗಳಿಂದ ಒಂದೇ ಒಂದು ಮಲೇರಿಯಾ ಪ್ರಕರಣ ದಾಖಲಾಗಿಲ್ಲ ಎಂಬುದೇ ಸಮಾಧಾನದ ಸಂಗತಿ. 79 ಡೆಂಘೀ ಪ್ರಕರಣ
ಆರೋಗ್ಯ ಇಲಾಖೆ ಎಷ್ಟೇ ಎಚ್ಚರಿಕೆ ಕ್ರಮ ನೀಡಿದರೂ ತಿಳಿವಳಿಕೆ ಕೊರತೆಯಿಂದ ಡೆಂಘೀ ಹಾಗೂ ಚಿಕೂನ್ ಗುನ್ಯಾ ರೋಗಗಳು ವರದಿಯಾಗುತ್ತಿವೆ. 2024ರ ಜನವರಿಯಿಂದ ಏಪ್ರಿಲ್ ವರೆಗೆ 752 ಶಂಕಿತ ರೋಗಿಗಳನ್ನು ಪರೀಕ್ಷಿಸಿದಾಗ 79 ಜನರಲ್ಲಿ ಡೆಂಘೀ ಕಂಡು ಬಂದಿದೆ. ಅದೇ ರೀತಿ ಚಿಕೂನ್ ಗುನ್ಯಾ ಸಹ ಎಂಟು ಜನರಲ್ಲಿ ಕಂಡು ಬಂದಿದೆ. ಇನ್ನು, ಮೆದುಳು ಜ್ವರ ರೋಗ ಲಕ್ಷಣಗಳು ಕಂಡ ಬಂದ 20 ಜನರನ್ನು ಪರೀಕ್ಷೆ ಮಾಡಿದ್ದು ವರದಿ ನೆಗೆಟಿವ್ ಬಂದಿದೆ. ಇನ್ನು, ಆನೆಕಾಲು ರೋಗ ಧಾರವಾಡ ಜಿಲ್ಲೆಯಲ್ಲಿಲ್ಲ ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳಿಂದ ತಿಳಿದು ಬಂದಿದೆ.;Resize=(128,128))
;Resize=(128,128))