ದೇವೀರಮ್ಮ ಜಾತ್ರೆಗೆ ಮುನ್ನೆಚ್ಚರಿಕೆ ಕ್ರಮ

| Published : Oct 15 2025, 02:06 AM IST

ಸಾರಾಂಶ

ತಾಲೂಕಿನ ಬಿಂಡಿಗ ಶ್ರೀ ದೇವೀರಮ್ಮನವರ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ತಿಳಿಸಿದರು.

ಚಿಕ್ಕಮಗಳೂರು: ತಾಲೂಕಿನ ಬಿಂಡಿಗ ಶ್ರೀ ದೇವೀರಮ್ಮನವರ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ತಿಳಿಸಿದರು.ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ. ದೀಪಾವಳಿಯ ಮೊದಲ ದಿನ ಅ.19ರಂದು ನರಕ ಚತುರ್ದಶಿ ಅಂಗವಾಗಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಭಕ್ತರು ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯಬಹುದು, ಮರುದಿನ ಅ.20ರಂದು ಬೆಳಗ್ಗೆ 8ರಿಂದ ಸಂಜೆ 3 ರವರೆಗೆ ಬೆಟ್ಟ ಹತ್ತಲು ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.ಅ.18 ಮತ್ತು 19 ರಂದು ಅತಿ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬೆಟ್ಟ ಹತ್ತುವ ಭಕ್ತಾದಿಗಳಿಗೆ ದಾರಿಯಲ್ಲಿ ಯಾವುದೇ ಅಡಚಣೆಯಾಗದಂತೆ ಜೊತೆಗೆ ಭೂಮಿ ಜರುಗುವ ಭಾಗದಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.ಜನದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ದೇವಸ್ಥಾನ ಸಮಿತಿ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಭಕ್ತಾದಿಗಳಿಗೆ ಸೂಚನೆ ನೀಡುವ ಫಲಕಗಳನ್ನು ಬೆಟ್ಟದಲ್ಲಿ ಅಳವಡಿಸಲಾಗಿದ್ದು, ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿರುವುದು ಡ್ರೋನ್ ಸರ್ವೆ ಮತ್ತು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.ಈ ಬಾರಿ ರಾತ್ರಿ ವೇಳೆ ಬೆಟ್ಟ ಹತ್ತಲು ಅವಕಾಶವಿರುವುದಿಲ್ಲ. ಗಿರಿ ಪ್ರದೇಶದಲ್ಲಿ ತುಂಬಾ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರಿಕೆ ಇದೆ. ರಾತ್ರಿ ವೇಳೆ ಬೆಟ್ಟ ಹತ್ತುವುದು ಅಪಾಯಕಾರಿಯಾಗಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ರಾತ್ರಿ ಬೆಟ್ಟ ಹತ್ತಲು ಅವಕಾಶ ಇರುವುದಿಲ್ಲ ಎಂದರು.15 ವರ್ಷದ ಒಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು ಮತ್ತು ಆರೋಗ್ಯದ ಸಮಸ್ಯೆ ಇರುವವರು ಬೆಟ್ಟ ಹತ್ತುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ತೀರ್ಮಾನಕ್ಕೆ ಬರಲಾಗಿದೆ. ಇದೆಲ್ಲಾ ಕ್ರಮಗಳು ಭಕ್ತರ ಹಿತದೃಷ್ಟಿಯಿಂದ ಜಾರಿಗೆ ತರಲಾಗುತ್ತಿದೆ. ಭಕ್ತರ ನೂಕು ನುಗ್ಗಲು ತಪ್ಪಿಸಿ ಎಲ್ಲರಿಗೂ ದೇವಿ ದರ್ಶನ ಸುಗಮವಾಗಲಿ ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲ ಬೆಟ್ಟ ಹತ್ತಲು ಅವಕಾಶ ನೀಡಲಾಗತ್ತಿದೆ. ಈ ಕಾರಣಕ್ಕೆ ಭಕ್ತರು ರಾತ್ರಿ ವೇಳೆ ಬೆಟ್ಟ ಹತ್ತದೆ ದೇವಸ್ಥಾನ ಸಮತಿ ಮತ್ತು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.22ಕ್ಕೆ ಜಾತ್ರಾ ಮಹೋತ್ಸವ:

ಪ್ರತಿ ವರ್ಷದಂತೆ ಈ ಬಾರಿಯೂ ನರಕ ಚತುರ್ದಶಿಯ ದಿನ ಸಂಜೆ 7 ಗಂಟೆಗೆ ಬೆಟ್ಟದಲ್ಲಿ ದೀಪೋತ್ಸವ ಜರುಗಲಿದೆ. ನಂತರ ಬೆಟ್ಟದ ತಪ್ಪಿಲಿನ ದೇವೀರಮ್ಮನವರ ದೇವಸ್ಥಾನದಲ್ಲಿ ಯಥಾ ಪ್ರಕಾರ ಮರುದಿನ ದೇವಿಯವರಿಗೆ ಉಡುಗೆ ಪೂಜೆ ಜೊತೆಗೆ ಸಂಜೆ ಎಣ್ಣೆ ಬಟ್ಟೆ ಸುಡುವ ಕಾರ್ಯಕ್ರಮ ಇರುತ್ತದೆ. 22ರಂದು ಕೆಂಡಾರ್ಚನೆ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ. ಅಪಾಯದ ಜಾಗದಲ್ಲಿ ಹೋಗುವಹಾಗಿಲ್ಲ, ಸೆಲ್ಫಿ ತೆಗೆಯಲು ಅವಕಾಶವಿಲ್ಲ, ಬೆಟ್ಟದ ದಾರಿ ಹೊರತುಪಡಿಸಿ ಬೇರೆಲ್ಲೂ ಹೋಗಬಾರದು. ಉಪವಾಸದಿಂದ ಆಗಮಿಸುವ ಭಕ್ತರು ಓಆರ್‌ಎಸ್, ಚಾಕಲೇಟ್, ಗ್ಲೂಕೋಸ್-ಡಿ ಮುಂತಾದವುಗಳನ್ನು ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.ರಸ್ತೆ ಇಕ್ಕೆಲಗಳಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ:

ಕಳೆದ ಬಾರಿಯಂತೆ ಆರ್‌ಜಿ ರಸ್ತೆ, ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಖಾಸಗಿ ವಾಹನಗಳಲ್ಲಿ ಹೋಗುವ ಭಕ್ತರಿಗೆ ಮಲ್ಲೇನಹಳ್ಳಿ ಸರ್ಕಾರಿ ಕಾಲೇಜು ಬಳಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ತರೀಕೆರೆ ಭಾಗದಿಂದ ಆಗಮಿಸುವ ಭಕ್ತರಿಗೆ ಕುಮಾರಗಿರಿ ಸಮೀಪ ಪಾರ್ಕಿಂಗ್ ಮಾಡಬೇಕು, ರಸ್ತೆ ಇಕ್ಕೆಲಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.50ಕ್ಕೂ ಹೆಚ್ಚು ಬಸ್‌ ವ್ಯವಸ್ಥೆ:

ಕೆಎಸ್‌ಆರ್‌ಟಿ ಬಸ್ ನಿಲ್ದಾಣದಿಂದ ಸುಮಾರು 50ಕ್ಕೂ ಹೆಚ್ಚು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. 19ರಂದು ಬೆಳಗ್ಗೆ 7 ಗಂಟೆ ಹಾಗೂ 20 ರಂದು ಬೆಳಗ್ಗೆ 6.30ಕ್ಕೆ ಬಸ್‌ಗಳು ನಗರದ ಬಸ್ ನಿಲ್ದಾಣದಿಂದ ಹೊರಡಲಿದೆ. ಅ.19 ಮತ್ತು 20 ಹೊರತು ಪಡಿಸಿ ಉಳಿದೆಲ್ಲಾ ದಿನವೂ ನಿರಂತರವಾಗಿ ಭಕ್ತರಿಗೆ ಅನ್ನದಾನ ಮಾಡಲಾಗುತ್ತದೆ. ಬೆಟ್ಟದ ಮೇಲೆ ದೇವಿಗೆ ತೆಂಗಿನ ಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಪಾದರಕ್ಷೆ ಧರಿಸದೆ ಬರಿಗಾಲಿನಲ್ಲಿ ಭಕ್ತರು ಬೆಟ್ಟ ಹತ್ತಬೇಕು. ಬೆಟ್ಟ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಉಪಸ್ಥಿತರಿದ್ದರು.