ಸಾರಾಂಶ
ನಾನು ಈ ಮೊದಲು ಹೇಳಿರುವ ಭವಿಷ್ಯವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದ ಮೂಲಕ ನಿಜವಾಗಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಧಾರವಾಡ: ನಾನು ಈ ಮೊದಲು ಹೇಳಿರುವ ಭವಿಷ್ಯವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದ ಮೂಲಕ ನಿಜವಾಗಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಲುಕಿದ್ದು, ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕಟ್ ಮಾಡಿಸುತ್ತಾರೆ. ಕರ್ಣನ ಕೈಯಿಂದ ಆ ದಾರವನ್ನು ಕಟ್ ಮಾಡಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದೇ. ಅಂತೆಯೇ, ಅಭಿಮನ್ಯು ಹೆಂಡಿತಿಯು ರಣರಂಗ ಪ್ರವೇಶಿಸುತ್ತಾಳೆ ಎಂದಿದ್ದು, ಈಗ ಏನಾಯ್ತು? ಸಿದ್ದರಾಮಯ್ಯನವರ ಜೀವನದಲ್ಲಿ ಅವರ ಪತ್ನಿ ಎಂದಿಗೂ ಹೊರ ಬರಲಿಲ್ಲ. ಆದರೆ, ಈಗ ಮುಡಾ ಹಗರಣದಲ್ಲಿ ಅವರ ಹೆಸರು ಹೊರ ಬಂದಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಹೆಚ್ಚಾಗುತ್ತವೆ ಆಕಸ್ಮಿಕ ಮೃತ್ಯುಗಳು:
ಹಿಂಗಾರು ಹಂಗಾಮಿಗೂ ಮಳೆ ಹೆಚ್ಚಾಗುತ್ತದೆ. ವಿಷ ವಾಯು ಬೀಸಿದರೂ ಅಚ್ಚರಿ ಏನಿಲ್ಲ. ವಿಷ ವಾಯುವಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಆಕಸ್ಮಿಕ ಮೃತ್ಯುಗಳು ಸಹ ಹೆಚ್ಚಾಗಲಿವೆ ಎಂದು ಶ್ರೀಗಳು ಹೇಳಿದ್ದಾರೆ.
ಭೂಮಿಯಿಂದ ವಿಷ ಜಂತುಗಳು ಹೊರಗೆ ಬರುತ್ತವೆ. ಅವು ಮನುಷ್ಯ ಕುಲ ನಾಶ ಮಾಡುತ್ತವೆ. ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುತ್ತವೆ ಎಂದ ಸ್ವಾಮೀಜಿ, ಯುದ್ಧ ಭೀತಿಯೂ ಇದೆ. ಜನರ ಶಾಂತಿ, ಸಹನೆ, ಆರೋಗ್ಯ ಕೆಡುತ್ತದೆ. ದೊಡ್ಡ ನಗರಗಳಿಗೆ ಆಪತ್ತು ಇದೆ. ಭೂಕುಸಿತ, ಭೂಕಂಪಗಳು ಹೆಚ್ಚಾಗುತ್ತವೆ. ಭೂಮಿ ಸಡಿಲಾಗಿ ಜನರ ಸಾವು-ನೋವಾಗುತ್ತವೆ ಎಂದರು.
ತಿರುಪತಿ ಲಡ್ಡು ಅಪವಿತ್ರ ಕುರಿತ ಪ್ರಶ್ನೆಗೆ, ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ ಇದ್ದು, ಆದರೆ, ರಕ್ಷಕನೇ ಇಲ್ಲ. ಹೀಗಾಗಿ ದುರ್ಯೋಧನ ಗೆದ್ದನು. ಈಗ ಸ್ಥಳ ಸ್ವಚ್ಛತೆ ಮಾಡಲಾಗುತ್ತಿದೆ. ಇದು ಧರ್ಮಶಾಸ್ತ್ರ. ಆದರೆ, ನಾಲ್ಕು ವರ್ಷಗಳ ಕಾಲ ಅಪವಿತ್ರ ಲಡ್ಡು ತಿಂದಿದ್ದಾರಲ್ಲಾ? ಎಲ್ಲ ಕಡೆ ಅನೈತಿಕತೆ ಹೆಚ್ಚಾಗುತ್ತಿದೆ. ಇದು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದರು.