ಗಿಡಮೂಲಿಕೆ ಔಷಧಿ ಬಳಕೆಗೆ ಆದ್ಯತೆ ನೀಡಿ: ಪರಮಶಿವಯ್ಯ

| Published : May 03 2024, 01:08 AM IST

ಸಾರಾಂಶ

ಗಿಡಮೂಲಿಕೆ ಔಷಧಿಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದ ಪಂಡಿತ್ ಪರಮಶಿವಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಗಿಡಮೂಲಿಕೆ ಔಷಧಿಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಆಯುರ್ವೇದ ಪಂಡಿತ್ ಪರಮಶಿವಯ್ಯ ತಿಳಿಸಿದರು. ನಗರದ ಗೋವಿನಪುರದಲ್ಲಿರುವ ಬಸವರಾಧ್ಯ ನೈಸರ್ಗಿಕ ಚಿಕಿತ್ಸಾ ಹಾಗೂ ಪಶುಗಳ ಸಂರಕ್ಷಣಾ ಕೇಂದ್ರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು, ಎಸ್‌ಪಿವೈಎಸ್‌ಎಸ್ ಮಕ್ಕಳ ಯೋಗ ಶಿಕ್ಷಣ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಚಾರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರಳ ಆಹಾರ ಪದ್ದತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಹಾರವೇ ಔಷಧವಾಗಬೇಕಿದ್ದು, ಕಾಫಿ, ಟೀ ಬಿಟ್ಟು ಸಾವಯವ ಬೆಲ್ಲ, ಅಮೃತ ಬಳ್ಳಿ, ಬೇವಿನ ಚಕ್ಕೆಯಿಂದ ಪ್ರತಿನಿತ್ಯ ಕಷಾಯ ಮಾಡಿ ಕುಡಿಯಬೇಕು. ಅಮೃತ ಬಳ್ಳಿಯ ಸಸ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಸಸ್ಯಗಳ ಬೇರಿನಲ್ಲಿ ಔಷಧೀಯ ಗುಣಗಳು ಹೆಚ್ಚಾಗಿರುತ್ತವೆ ಎಂದರು.

ಕೊನ್ನಾರಿಗಡ್ಡೆ, ಬೇವಿನ ಸೊಪ್ಪು, ಹರಳಿ ಎಲೆ, ಮುತ್ತುಗದೆಲೆ ಇವುಗಳ ಔಷಧಿಗಳ ಆಗರವಾಗಿದ್ದು, ಕೊನ್ನಾರಿಗೆಡ್ಡೆಯ ಹಬೆ ತೆಗೆದುಕೊಳ್ಳುವುದರಿಂದ ಶ್ವಾಸಕೋಶ ಶುದ್ದವಾಗುತ್ತದೆ. ಮುತ್ತುಗದ ಬೀಜದಿಂದ ಕಷಾಯ ಮಾಡಿ, ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹವು ವಜ್ರಕಾಯದಂತಾಗುತ್ತದೆ. ಎರದೆ ಹಣ್ಣು, ಖನಿಜಗಳ ಕಣಜ ಎಂದೇ ಕರೆಯುವ ಕಾರೇಹಣ್ಣು, ತುಳಸಿ ಕಷಾಯದಿಂದ ಅನ್ನನಾಳದಲ್ಲಾಗುವ ಹುಣ್ಣುಗಳನ್ನು ತಪ್ಪಿಸಬಹುದು. ಬಾರೆಹಣ್ಣು, ಕರ್ಬೂಜದಣ್ಣಿನಿಂದ ಹಲ್ಸರ್ ಗುಣವಾಗುತ್ತದೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಪ್ರತಿನಿತ್ಯ ಯೋಗಾಭ್ಯಾಸ, ಅಮೃತ ವಚನ, ಪಂಚಾಂಗ ಪಠಣ ಮಾಡುವುದು, ವಿಶೇಷ ಆಸನಗಳು, ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟು ಆಯುರ್ವೇಧ ಔಷಧಿಗಳ ಬಗ್ಗೆ ಅರಿವು ಮೂಡಿಸಲಾಯಿತು. ಮಕ್ಕಳು ಶ್ರದ್ಧೆ ಮತ್ತು ಆಸಕ್ತಿಯಿಂದ ಭಾಗವಹಿಸಿದ್ದರು. ಕಳೆದ 27 ದಿನಗಳಿಂದಲೂ ನಡೆದ ಈ ಕಾರ್ಯಕ್ರಮದಲ್ಲಿ ಎಸ್‌ಪಿವೈಎಸ್‌ಎಸ್‌ನ ಮುಖ್ಯ ನಿರ್ದೇಶಕ ಚನ್ನಬಸವಣ್ಣ, ಹೇಮಾವತಿ, ವಲಯ ಸಂಚಾಲಕ ಆಡಿಟರ್ ನೇತ್ರಾವತಿ, ಗಿರೀಶ್, ಶಶಿಧರ್, ಮುರುಳಿ, ಮಂಜಣ್ಣ, ರಾಜು, ತೇಜೇಶ್ ಮತ್ತಿತರ ಯೋಗ ಬಂಧುಗಳು ಭಾಗವಹಿಸಿದ್ದರು.