ಸಾರಾಂಶ
ಭಟ್ಕಳ : ಇತ್ತೀಚೆಗೆ ಪಕ್ಕದ ಹೊನ್ನಾವರ ತಾಲೂಕಿನಲ್ಲಿ ಗಬ್ಬದ ಗೋವನ್ನು ಕದ್ದು ಹತ್ಯೆಗೈದು ಗೋಮಾಂಸವನ್ನು ಸಾಗಾಟ ಮಾಡಿದ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಭಟ್ಕಳದಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ಭಟ್ಕಳ ತಾಲೂಕಿನ ಹೆಬಳೆಯ ಕುಕ್‌ನೀರ್ ಬಳಿಯಲ್ಲಿ ಗಬ್ಬದ ಹಸು ಕಡಿದ ದುರುಳರು ಹೊಟ್ಟೆಯೊಳಗಿದ್ದ ಕರು ಮತ್ತು ಗೋವಿನ ಬಾಲವನ್ನು ವೆಂಕಟಾಪುರ ನದಿಯಂಚಿನಲ್ಲಿ ಎಸೆದು ಗೋಮಾಂಸದೊಂದಿಗೆ ಪರಾರಿಯಾಗಿದ್ದಾರೆ.
ಗೋವಿನ ಹೊಟ್ಟೆಯೊಳಗಿದ್ದ ಪುಟ್ಟ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿದ್ದಾರೆ. ಗುರುವಾರ ಬೀದಿ ನಾಯಿಯೊಂದು ಚೀಲವನ್ನು ಎಳೆಯುತ್ತಿರುವಾಗ ಸ್ಥಳೀಯರು ನೋಡಿ ಪರಿಶೀಲಿಸಿದ್ದಾರೆ. ಆಗ ಸತ್ತ ಕರು ಇರುವುದು ಪತ್ತೆಯಾಗಿದೆ. ಜೊತೆಗೆ ಹಸುವಿನ ಬಾಲ ಕೂಡ ಅಲ್ಲಿಯೇ ಕಂಡುಬಂದಿದೆ. ತಕ್ಷಣ ಗ್ರಾಮೀಣ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋವಿನ ಅಂಗಾಂಗವನ್ನು ಕತ್ತರಿಸಿ ಮಾಂಸ ಮಾಡಿ ಮಾರಾಟ ಮಾಡಿರುವ ದುರುಳರು ಆತಂಕ ಸೃಷ್ಟಿಸುವುದಕ್ಕೋಸ್ಕರವೇ ಸಾರ್ವಜನಿಕ ಪ್ರದೇಶದಲ್ಲಿ ಕರುವನ್ನು ಚೀಲದಲ್ಲಿ ಹಾಕಿ ಬಿಸಾಕಿ ಹೋಗಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಹೊನ್ನಾವರದಲ್ಲಿ ಗಬ್ಬದ ಗೋವನ್ನು ಕದ್ದು ಮಾಂಸ ಮಾಡಿದ್ದ ಪ್ರಕರಣದಲ್ಲಿನ ಆರೋಪಿಗಳನ್ನು ಪೊಲೀಸರು ಹಿಡಿದು ಕಂಬಿ ಹಿಂದೆ ತಳ್ಳಿದ್ದರೂ ಗೋಕಳ್ಳರು ಕೃತ್ಯ ಮುಂದುವರಿಸಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಎರಡು ತಿಂಗಳ ಬಳಿಕ ಬಂಧಿಸಲಾಗಿತ್ತು. ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದರು.