ಸಾರಾಂಶ
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಐತಿಹಾಸಿಕವಾಗಿ ಸೆ. 15ರಂದು ನಡೆಯಲಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೀದರ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆ ವರೆಗೆ ಒಟ್ಟು 2500 ಕಿಮೀ ಮಾನವ ಸರಪಳಿ ರಚನೆಯ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಸೆ. 15ರಂದು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಪಂನ ಬೆಳಗಟ್ಟಿ ಗ್ರಾಮದಿಂದ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಿ ಹಿರೇಸಿಂಧೋಗಿ, ಚಿಕ್ಕಿಸಿಂಧೋಗಿ, ಕೊಪ್ಪಳ ನಗರ, ಗಿಣಿಗೇರಾ, ಹೊಸಳ್ಳಿ ಮಾರ್ಗವಾಗಿ ಕೊಪ್ಪಳ ಭೌಗೋಳಿಕ ಸರಹದ್ದಾದ ಮುನಿರಾಬಾದ್ ಡ್ಯಾಂ ವರೆಗೆ ಜಿಲ್ಲೆಯಲ್ಲಿ ಒಟ್ಟು 53 ಕಿಲೋ ಮೀಟರ್ ಮಾನವ ಸರಪಳಿ ರಚನೆಯಾಗಲಿದೆ ಎಂದು ಅವರು ತಿಳಿಸಿದರು.ಸೆ. 15ರಂದು ಬೆಳಗ್ಗೆ 9.37ರಿಂದ 9.40ರ ವರೆಗೆ ನಾಡಗೀತೆ ನಡೆಯಲಿದೆ. ಬೆಳಗ್ಗೆ 9.40ರಿಂದ 9.55ರ ವರೆಗೆ ಮುಖ್ಯ ಅತಿಥಿಗಳಿಂದ ಭಾಷಣ ನಡೆಯಲಿದೆ. ಬೆಳಗ್ಗೆ 9.55ರಿಂದ 9.57ರ ವರೆಗೆ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9.57ರಿಂದ 9.59ರ ವರೆಗೆ ಮಾನವ ಸರಪಳಿಯಲ್ಲಿ ಕೈಕೈ ಹಿಡಿದು ನಿಲ್ಲಲಾಗುತ್ತದೆ. 10 ಗಂಟೆಗೆ ಮಾನವ ಸರಪಳಿಯಲ್ಲಿ ಎರಡು ಕೈಗಳನ್ನು ಮೇಲೆತ್ತಿ ಜೈಹಿಂದ್ ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಪ್ರತಿನಿಧಿಗಳು, ಹಾಲು ಒಕ್ಕೂಟದ ಸದಸ್ಯರು ಸೇರಿದಂತೆ ಆಯಾ ಕಡೆಗಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಮಾನವ ಸರಪಳಿ ಹೊರಡುವ ಮಾರ್ಗಗಳ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮತ್ತು ಪಿಡಿಒ ಅವರ ಸಹಭಾಗಿತ್ವದಲ್ಲಿ ಆಯಾ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಮಾನವ ಸರಪಳಿ ಆರಂಭವಾಗುವ ಸ್ಥಳದಿಂದ ಮುಕ್ತಾಯದ ಸ್ಥಳದ ವರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಮಾನವ ಸರಪಳಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಪ್ರತಿ 5 ಕಿ.ಮೀ.ಗೆ ಒಂದರಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಕಿಟ್‌ನೊಂದಿಗೆ ಮಹಿಳಾ ಶೂಶ್ರೂಕರನ್ನು ನೇಮಿಸಲಾಗಿದೆ.ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹತ್ತಾರು ಬಾರಿ ಸಭೆ ನಡೆಸಿ, ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಮಾಡಲಾಗಿದೆ. ಎಲ್ಲ ಆಕಡೆಗಳಲ್ಲಿ ಬ್ಯಾನರ್ ಅಳವಡಿಸಿ ವ್ಯಾಪಕ ಪ್ರಚಾರ ಮಾಡಲಾಗಿದೆ.
ಮಾನವ ಸರಪಳಿ ಕಾರ್ಯಕ್ರಮ ಎಲ್ಲ ಕಡೆಗೆ ಅಚ್ಚುಕಟ್ಟಾಗಿ ನಡೆಯುವ ನಿಟ್ಟಿನಲ್ಲಿ ಬೆಳಗಟ್ಟಿಯಿಂದ ಹೊಸಪೇಟೆ ಸರಹದ್ದಿನ ವರೆಗೆ ಮಾರ್ಕಿಂಗ್ ಮಾಡುವ ಕಾರ್ಯ ಸಹ ಪೂರ್ಣಗೊಂಡಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೊಪ್ಪಳ ತಾಲೂಕು, ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಸಾರ್ವಜನಿಕರು ತಪ್ಪದೇ ಭಾಗವಹಿಸಿ ಕಾರ್ಯಕ್ರಮ ಯಶಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪತ್ರಿಕಾಗೋಷ್ಠಿಯ ಮೂಲಕ ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ತಳವಾರ ಇದ್ದರು.