ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ: ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಿ, ಗತ ವೈಭವವನ್ನು ಮೆಲುಕು ಹಾಕಿ ಅದೇ ಮಾದರಿಯ ನಾಡು ಕಟ್ಟೋಣ ಎಂಬ ಸಂಕಲ್ಪ ಒಂದೆಡೆಯಾದರೆ, ಇದೇ ವಿಜಯ ನಗರ ಸಾಮ್ರಾಜ್ಯದ ರಾಜಧಾನಿಯಾಗಿ ಗುರುತಿಸಿಕೊಂಡಿದ್ದ ಆನೆಗೊಂದಿ ಉತ್ಸವವನ್ನು ಸರ್ಕಾರ ಮರೆತಿದೆ. ನಿರ್ಲಕ್ಷಿಸಿದೆ.ಕಳೆದ ಐದು ವರ್ಷಗಳಿಂದ ಆನೆಗೊಂದಿ ಉತ್ಸವ ನಡೆದಿಲ್ಲ. ಈ ಬಾರಿಯೂ ನಡೆಯುವ ಲಕ್ಷಣಗಳಿಲ್ಲ. ಸರ್ಕಾರ ಹಲವಾರು ಉತ್ಸವಗಳಿಗೆ ಅನುದಾನ ಬಿಡುಗಡೆ ಮಾಡಿದ್ದರೂ ಅದರಲ್ಲಿ ಆನೆಗೊಂದಿ ಉತ್ಸವ ಸೇರಿಲ್ಲ. ಇದರಿಂದ ಐತಿಹಾಸಿಕ ಪ್ರದೇಶ ಆನೆಗೊಂದಿಯನ್ನು ಕಡೆಗಣಿಸಲಾಗುತ್ತಿದೆ.
ರಾಜ್ಯದಲ್ಲಿ ನಡೆಯುವ 25ಕ್ಕೂ ಹೆಚ್ಚು ಉತ್ಸವಗಳಿಗೆ ಅನುದಾನ ನೀಡುತ್ತದೆ. ಕನಕಗಿರಿ ತಾಲೂಕಿನ ಕನಕಗಿರಿ ಉತ್ಸವಕ್ಕೆ ₹2.5 ಕೋಟಿ ಅನುದಾನ ನಿಗದಿಪಡಿಸಿದ್ದರೆ, ಇದೇ ತಾಲೂಕಿನ ಆನೆಗೊಂದಿ ಉತ್ಸವ ಬಗ್ಗೆ ಗಮನ ಇಲ್ಲದಂತಾಗಿದೆ. 2018ರಲ್ಲಿ ನಡೆದ ಆನೆಗೊಂದಿ ಉತ್ಸವ ನಂತರ ಆಚರಣೆಯೇ ಆಗಿಲ್ಲ.ಈ ಹಿಂದೆ 1997ರಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದ ದಿ.ಎಂ.ಪಿ. ಪ್ರಕಾಶ ಹಂಪಿ ಉತ್ಸವ ಜೊತೆಗೆ ಆನೆಗೊಂದಿ ಉತ್ಸವಕ್ಕೂ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ಸರ್ಕಾರ ಅನುದಾನ ನೀಡದಿದ್ದರೂ ಗಂಗಾವತಿಯ ಉದ್ಯಮಿಗಳು ಸೇರಿದಂತೆ ಕೆಲ ಮುಖಂಡರ ನೇತೃತ್ವದಲ್ಲಿ ಆಚರಣೆ ಮಾಡಲಾಯಿತು. ನಂತರ ಮಾಜಿ ಸಚಿವ ದಿ.ಶ್ರೀರಂಗದೇವರಾಯಲು, ಇಕ್ಬಾಲ್ ಅನ್ಸಾರಿ, ಪರಣ್ಣ ಮುನವಳ್ಳಿ ತಮ್ಮ ಅಧಿಕಾರಾವಧಿಯಲ್ಲಿ ಉತ್ಸವಗಳನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದರು. ಈಗ ಆನೆಗೊಂದಿ ಉತ್ಸವ ಬಗ್ಗೆ ಪ್ರಸ್ತಾವನೆ ಇಲ್ಲದಂತಾಗಿದೆ ಎಂಬ ದೂರು ಕೇಳಿ ಬರುತ್ತಿದೆ.
ಈಗಾಗಲೇ ಕನಕಗಿರಿ ಉತ್ಸವ ಬಗ್ಗೆ ಕ್ಷೇತ್ರದ ಶಾಸಕರೂ ಆಗಿರುವ ಕನ್ನಡ-ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮುತುವರ್ಜಿ ವಹಿಸಿ ಕನಕಗಿರಿ ಉತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ. ಮಾರ್ಚ್ 2, 3ರಂದು ಉತ್ಸವ ಆಚರಿಸಲು ನಿರ್ಧರಿಸಿದ್ದಾರೆ.ಹಂಪಿ ಉತ್ಸವ ಪ್ರಾರಂಭಗೊಂಡಿದ್ದು, ಇದರ ರಾಜಧಾನಿಯಾಗಿರುವ ಆನೆಗೊಂದಿ ಉತ್ಸವಕ್ಕೆ ಉತ್ಸಹದ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಉತ್ಸವ ಆಚರಣೆ ಬಗ್ಗೆ ಗಮನಹರಿಸಿದರೆ ಆನೆಗೊಂದಿ ರಾಜಧಾನಿಗೆ ಗತ ವೈಭವ ಮರುಕಳಿಸಲಿದೆ.
ಆನೆಗೊಂದಿ ಉತ್ಸವಕ್ಕೆ ಪ್ರಸ್ತಾವನೆ:ವಿಜಯನಗರ ಸಾಮ್ರಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಉತ್ಸವ ನಡೆಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು. ದೂರವಾಣಿ ಮೂಲಕ ಕನ್ನಡಪ್ರಭಕ್ಕೆ ತಿಳಿಸಿದ ಅವರು ಜನವರಿ 22ರಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಮತ್ತು ಜ.29 ರಂದು ಪ್ರವಾಸೋದ್ಯಮ ಇಲಾಖೆಗೆ ಜಿಲ್ಲಾದಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.ಅಲ್ಲದೇ ತಾವು ಸಹ ಸರಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ಅಭಿಪ್ರಾಯಿಸಿದರು. ಆನೆಗೊಂದಿ ಉತ್ಸವವ್ವು ಅದ್ದೂರಿಯಾಗಿ ಮಾಡುವದಾಗಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಶಾಸಕರು ಮುಂದೆ ಬಂದರೆ ಅನುದಾನ: ರಾಜ್ಯದಲ್ಲಿ ಮೊದಲಿನಿಂದಲೂ ಆಚರಿಸುತ್ತಿರುವ ಉತ್ಸವಗಳಿಗೆ ಸರ್ಕಾರ ಅನುದಾನ ನೀಡುತ್ತದೆ. ಅದರಂತೆ ಕನಕಗಿರಿ ಉತ್ಸವಕ್ಕೆ ಸಿದ್ಧತೆ ನಡೆದಿದೆ. ಆದರೆ ಆನೆಗೊಂದಿ ಉತ್ಸವ ಆಚರಿಸಲು ಸ್ಥಳೀಯ ಶಾಸಕರು ಮುಂದೆ ಬಂದರೆ ಅನುದಾನ ನೀಡಲಾಗುತ್ತದೆ ಎನ್ನುತ್ತಾರೆ ಕನ್ನಡ-ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ,.