ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವಕ್ಕೆ ಸಿದ್ಧತೆ

| Published : Mar 29 2024, 12:50 AM IST

ಸಾರಾಂಶ

ಚುನಾವಣೆ ನೀತಿ ಸಂಹಿತೆ ಇರುವುದರಿಂದ ಜಾತ್ರೆಗಾಗಿ ಯಾವುದೇ ಅಧಿಕೃತ ಸಮಿತಿ ರಚಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಜಾತ್ರಾ ಯಶಸ್ಸಿಗಾಗಿ ಸಮಿತಿಗಳ ರಚಿಸಲಾಗುತ್ತದೆ. ಅಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಸಾರ್ವಜನಿಕರು ಎಂದಿನಂತೆ ಪಾಲ್ಗೊಂಡು ಜಾತ್ರೆಯ ಅದ್ದೂರಿಯಾಗಿ ನಡೆಸಲು ಸಹಕಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಸಾಗರ

ಇತಿಹಾಸ ಪ್ರಸಿದ್ಧ ಪಟ್ಟಣದ ಶ್ರೀ ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವ ಏ.೧೨ರಂದು ನಡೆಯಲಿದೆ ಎಂದು ಉಪವಿಭಾಗಾಧಿಕಾರಿ ಯತೀಶ್ ಆರ್. ತಿಳಿಸಿದರು.

ಮಹಾಗಣಪತಿ ಜಾತ್ರೋತ್ಸವ ಅಂಗವಾಗಿ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಏ.೯ರಿಂದ ೧೫ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಏ.೧೩ರಿಂದ ೧೭ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಇರುವುದರಿಂದ ಜಾತ್ರೆಗಾಗಿ ಯಾವುದೇ ಅಧಿಕೃತ ಸಮಿತಿ ರಚಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಜಾತ್ರಾ ಯಶಸ್ಸಿಗಾಗಿ ಸಮಿತಿಗಳ ರಚಿಸಲಾಗುತ್ತದೆ. ಅಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಸಾರ್ವಜನಿಕರು ಎಂದಿನಂತೆ ಪಾಲ್ಗೊಂಡು ಜಾತ್ರೆಯ ಅದ್ದೂರಿಯಾಗಿ ನಡೆಸಲು ಸಹಕಾರ ನೀಡಬೇಕು ಎಂದರು.

ಗಣಪತಿ ಜಾತ್ರೆ ಯಶಸ್ಸಿಗೆ ಸುಮಾರು ೧೧.೫೦ ಲಕ್ಷ ರು. ಬಜೆಟ್ ಸಿದ್ದಪಡಿಸಿ ಮಂಜೂರಾತಿಗೆ ಸರ್ಕಾರಕ್ಕೆ ಕಳಿಸಲಾಗಿದೆ. ಜೊತೆಗೆ ಸ್ಟಾಲ್ ಹರಾಜ್ ಹಾಕುವ ಮೂಲಕ ದೇವಸ್ಥಾನಕ್ಕೆ ಆದಾಯ ಸಂಗ್ರಹ ಮಾಡಲಾಗುತ್ತದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲು ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತ್ರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಇದರ ಜೊತೆಗೆ ಕಲಾತಂಡಗಳಿಂದ ಶೇ. ೧೦೦ ಮತದಾನ ಮಾಡುವ ಬಗ್ಗೆ ಜಾಗೃತಿ, ಬೀದಿ ನಾಟಕ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ ಎಂದರು.

ತಹಸೀಲ್ದಾರ್ ಸೈಯದ್ ಕಲಿಮುಲ್ಲಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲದ್, ಪೌರಾಯುಕ್ತ ಲಿಂಗರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ಪ್ರಮುಖರಾದ ಪ್ರವೀಣ ಕುಮಾರಿ, ಟಿ.ವಿ.ಪಾಂಡುರಂಗ, ಐ.ವಿ.ಹೆಗಡೆ, ತಾರಾಮೂರ್ತಿ, ಪ್ರತಿಮಾ ಜೋಗಿ, ನಾಗೇಂದ್ರ ಕೆ.ಎನ್. ಇನ್ನಿತರರಿದ್ದರು.