ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ವಾರ್ಡ್ ಸಮಿತಿ ರಚನೆ ಮಾಡದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ಹುಬ್ಬಳ್ಳಿ- ಧಾರವಾಡ ವಾರ್ಡ್ ಸಮಿತಿ ಬಳಗ ನಿರ್ಧರಿಸಿದೆ. ಇದಕ್ಕಾಗಿ ಇದೀಗ ಟ್ರಸ್ಟ್ ಮಾಡಿಕೊಂಡು ಚಂದಾ ಸಂಗ್ರಹಿಸುತ್ತಿರುವ ಬಳಗವೂ, ಈ ತಿಂಗಳಾಂತ್ಯದಲ್ಲಿ ಪಿಐಎಲ್ ಅರ್ಜಿ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮಹಾನಗರ ಪಾಲಿಕೆಗೆ ಆಡಳಿತ ಮಂಡಳಿ ಬಂದು ಬರೋಬ್ಬರಿ 3 ವರ್ಷಕ್ಕೂ ಅಧಿಕ ಕಾಲವೇ ಆಗಿದೆ. ಆದರೆ, ಈ ವರೆಗೂ ಪಾಲಿಕೆ ಮಾತ್ರ ವಾರ್ಡ್ ಸಮಿತಿ ರಚಿಸಿಲ್ಲ.ಏನಿದು ಸಮಿತಿ?
ಪಾಲಿಕೆ ಆಡಳಿತ ಮಂಡಳಿಗೆ ಚುನಾವಣೆ ಮುಗಿದು, ಸದಸ್ಯರಾದ ಬಳಿಕ ವಾರ್ಡ್ ಸಮಿತಿ ರಚಿಸಬೇಕು. ಇದರಿಂದ ವಾರ್ಡ್‌ಗಳ ಅಭಿವೃದ್ಧಿಗೆ ಪೂರಕವಾಗುತ್ತದೆ. ವಾರ್ಡ್ ಸಮಿತಿಗೆ ಮೂವರು ಸಾಮಾನ್ಯ, ಇಬ್ಬರು ಎಸ್ಸಿ-ಎಸ್ಟಿ, ಮೂವರು ಮಹಿಳೆಯರು, ಇಬ್ಬರು ಸಂಘ-ಸಂಸ್ಥೆ ಅಥವಾ ಆ ವಾರ್ಡ್ ನಿವಾಸಿಗಳ ಸಂಘದವರನ್ನು ಸದಸ್ಯರನ್ನಾಗಿ ಮಾಡಬೇಕು. ಒಟ್ಟು 10 ಜನ ಸದಸ್ಯರಿರುತ್ತಾರೆ. ಈ ಸಮಿತಿಗೆ ಆ ವಾರ್ಡ್‌ನ ಪಾಲಿಕೆ ಸದಸ್ಯರು ಅಧ್ಯಕ್ಷರಾಗಿದ್ದರೆ, ಪಾಲಿಕೆ ಬಿ ಗ್ರೂಪ್ ಅಧಿಕಾರಿಯೊಬ್ಬರನ್ನು ಕಾರ್ಯದರ್ಶಿಯನ್ನಾಗಿ ನಿಯುಕ್ತ ಮಾಡಬೇಕು. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಬೇಕು. ಆ ವಾರ್ಡ್‌ನಲ್ಲಿ ಆಗಬೇಕಾದ ಕೆಲಸ, ಆಗಿರುವ ಕೆಲಸಗಳಲ್ಲಿ ದೋಷ ತಿಳಿಸುವುದು. ವಾರ್ಡ್ ಅಭಿವೃದ್ಧಿಗೆ ಪೂರಕವಾಗುವಂತೆ ಕೆಲಸ ನಿರ್ವಹಿಸುವುದೇ ಮುಖ್ಯ ಉದ್ದೇಶ.2023ರಲ್ಲೇ 2 ಬಾರಿ, 2024ರಲ್ಲಿ 2 ಬಾರಿ ಪಾಲಿಕೆ ಅರ್ಜಿ ಆಹ್ವಾನಿಸಿದೆ. 620, 436. 1058 ಹೀಗೆ ಅರ್ಜಿಗಳು ಬಂದಿವೆ. ನಾಲ್ಕನೆಯ ಬಾರಿ ಅರ್ಜಿ ಆಹ್ವಾನಿಸಿದಾಗ ಬರೀ 36 ಅರ್ಜಿಗಳು ಮಾತ್ರ ಬಂದಿದ್ದವು. ನಾಲ್ಕನೆಯ ಬಾರಿಗೆ ಅರ್ಜಿ ಹಾಕುವುದು ಬೇಡ ಎಂದು ವಾರ್ಡ್ ಸಮಿತಿ ಬಳಗ ನಿರ್ಧರಿಸಿತ್ತು. ಹೀಗಾಗಿ ಆಗ ಬರೀ 36 ಅರ್ಜಿ ಮಾತ್ರ ಬಂದಿದ್ದವು. ಬಂದ ಅರ್ಜಿಗಳಲ್ಲೇ ಮಂಗಳೂರು ಪಾಲಿಕೆಯಲ್ಲಿ ಮಾಡಿದಂತೆ ಸಮಿತಿ ರಚಿಸಬೇಕು ಎಂಬ ಬೇಡಿಕೆ ವಾರ್ಡ್ ಸಮಿತಿ ಬಳಗದ್ದು.
ಕೋರ್ಟ್ ಮೊರೆ ಏಕೆ?ವಾರ್ಡ್ ಸಮಿತಿ ರಚನೆಗೆ ಪಾಲಿಕೆ ನಾಲ್ಕು ಬಾರಿ ಅರ್ಜಿ ಕರೆದಿದೆ. ಆದರೆ, ನಿಗದಿತ ಅರ್ಜಿ ಬಂದಿಲ್ಲ ಎಂಬುದು ಪಾಲಿಕೆ ವಾದ. ಆದರೆ, ಬಂದಷ್ಟು ಅರ್ಜಿಯಲ್ಲೇ ಸಮಿತಿ ರಚಿಸಲು ಅವಕಾಶವಿದ್ದರೂ ಪಾಲಿಕೆ ಕ್ರಮಕೈಗೊಂಡಿಲ್ಲ ಎಂಬುದು ವಾರ್ಡ್ ಸಮಿತಿ ಬಳಗದ ಆರೋಪ.
ಹಿಂದಿನ ಅರ್ಜಿಗಳ ಕಥೆಯೇನಾಯಿತು ಎಂಬುದನ್ನು ತಿಳಿಸುತ್ತಿಲ್ಲ. ಹೀಗಾಗಿ ಹೈಕೋರ್ಟ್‌ಗೆ ಪಿಐಎಲ್ ಹೋಗಲು ನಿರ್ಧರಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಎಂದೇ ಟ್ರಸ್ಟ್ ಮಾಡಿಕೊಳ್ಳಲಾಗಿದೆ. ಬಳಗದ ಸದಸ್ಯರು ₹ 2ರಿಂದ ₹ 5 ಸಾವಿರ ಹೀಗೆ ತಮ್ಮ ಕೈಲಾದಷ್ಟು ದುಡ್ಡು ನೀಡುತ್ತಿದ್ದು, ಪಿಐಎಲ್ ಹಾಕಲು ಬೇಕಾಗುವ ಖರ್ಚಿಗಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಬಳಗ ತಿಳಿಸುತ್ತದೆ.ಪಾಲಿಕೆ ಸದಸ್ಯರ ವಿರೋಧ?
ವಾರ್ಡ್ ಸಮಿತಿ ರಚಿಸಿದರೆ ವಾರ್ಡ್ ಸದಸ್ಯರಿಗೆ ಸಮಿತಿ ಸಲಹೆ, ಸೂಚನೆ ನೀಡಲು ಶುರು ಮಾಡುತ್ತದೆ. ತಮ್ಮ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣದಿಂದ ಪಾಲಿಕೆ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಆಯುಕ್ತರು ಸಮಿತಿ ರಚಿಸುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ.ಮಂಗಳೂರು ಮಾದರಿಯಲ್ಲಿ ಇಲ್ಲೂ ವಾರ್ಡ್ ಸಮಿತಿ ರಚನೆ ಮಾಡಿ ಎಂದು ಕೋರಿದ್ದೇವೆ. ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳಿಗೆಲ್ಲ ಮನವಿ ಕೊಟ್ಟಿದ್ದು ಆಗಿದೆ. ಆದರೆ, ಯಾರು ಸ್ಪಂದಿಸಿಲ್ಲ. ಹೀಗಾಗಿ ಪಿಐಎಲ್ ಹಾಕಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದೇವೆ.
ಲಿಂಗರಾಜ ಧಾರವಾಡಶೆಟ್ಟರ್, ವಾರ್ಡ್ ಸಮಿತಿ ಬಳಗ