ಸಾರಾಂಶ
ನಗರದ ಸಾಯಿ ಸ್ಕೂಲ್ ಗ್ರೌಂಡ್‌ನಲ್ಲಿ ಜಿಲ್ಲೆಯ ಮಠಾಧೀಶರ ಒಕ್ಕೂಟ, ರಾಮಲೀಲಾ ಉತ್ಸವ ಸಮಿತಿ ಹಾಗೂ ಜಿಲ್ಲೆಯ ರಾಮ ಭಕ್ತರಿಂದ ಬೃಹತ್ ಕಾರ್ಯಕ್ರಮದ ತಯಾರಿ ಭರದಿಂದ ಸಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೀದರ್
ಭಾನುವಾರ ಹಾಗೂ ಸೋಮವಾರ ಬೀದರ್‌ನಲ್ಲಿ ನಡೆಯಲಿರುವ ರಾಮೋತ್ಸವ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದ್ದು ಎರಡು ದಿನ ಇಡೀ ಜಿಲ್ಲೆ ರಾಮಮಯವಾಗಲಿದೆ.ಅಯೋಧ್ಯೆಯಲ್ಲಿ ಜರುಗಲಿರುವ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ರಾಮೋತ್ಸವ ಕಾರ್ಯಕ್ರಮವು ಇಲ್ಲಿಯ ನೆಹರು ಕ್ರೀಡಾಂಗಣದ ಎದುರಿಗೆ ಇರುವ ಸಾಯಿ ಸ್ಕೂಲ್ ಗ್ರೌಂಡ್‌ನಲ್ಲಿ ಜಿಲ್ಲೆಯ ಮಠಾಧೀಶರ ಒಕ್ಕೂಟ, ರಾಮಲೀಲಾ ಉತ್ಸವ ಸಮಿತಿ ಹಾಗೂ ಜಿಲ್ಲೆಯ ರಾಮ ಭಕ್ತರಿಂದ ಬೃಹತ್ ಕಾರ್ಯಕ್ರಮದ ತಯಾರಿ ಭರದಿಂದ ಸಾಗುತ್ತಿದೆ.
ಬೀದರ್ ನಗರದಲ್ಲಿ ರಾಮನ ಭಾವಚಿತ್ರವುಳ್ಳ ಕಟೌಟ್‌ಗಳು ರಾರಾಜಿಸುತ್ತಿದ್ದು, ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಸುಮಾರು 40*64 ಅಳತೆಯ ವೇದಿಕೆ ನಿರ್ಮಿಸಲಾಗುತ್ತಿದ್ದು, ಭಾನುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಕಲಾ ತಂಡದಿಂದ ಜೈ ಶ್ರೀ ರಾಮ ಸಂಗೀತ ದರ್ಬಾರ ಜರುಗಲಿದೆ. ನಾಳೆ ಜ.22ರಂದು ಸಂಜೆ 5 ಗಂಟೆಗೆ ಶ್ರೀರಾಮನಿಗೆ ರುದ್ರಾಭಿಷಕ, 498 ಶ್ರೀರಾಮ ವೇಷಧಾರಿವುಳ್ಳ ಮಕ್ಕಳ ಮೇಲೆ ಪುಷ್ಪವರ್ಷ, ಸಾಮೂಹಿಕ ಹನುಮಾನ ಚಾಲಿಸಾ ಪಠಣ, ಕರಸೇವಕರಿಗೆ ಸನ್ಮಾನ, ಸಂತರ ಆಶೀರ್ವಚನ, ತದನಂತರ ರಾಮ ದರ್ಬಾರದಲ್ಲಿ ಲವ ಹಾಗೂ ಕುಶ ಎಂಬ ಇಬ್ಬರು ಮಕ್ಕಳು 16 ನಿಮಿಷಗಳ ಕಾಲ ಸಂಪೂರ್ಣ ರಾಮಾಯಣ ಗೀತ ಗಾಯನ ನಡೆಸುವರು.ಜಿಲ್ಲೆಯ ಎಲ್ಲ ಸನಾತನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಮುಖ್ಯ ಸಂಯೋಜಕರು ಹಾಗೂ ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಕೋರಿದ್ದಾರೆ.