ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಬಿಡುಗಡೆಗೆ ಸಿದ್ಧತೆ

| Published : Feb 08 2024, 01:31 AM IST / Updated: Feb 08 2024, 01:32 AM IST

ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಬಿಡುಗಡೆಗೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಕಟ್ಟದವರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ಪಾವತಿ ಮಾಡದ ಆಸ್ತಿ ಮಾಲೀಕರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಲು ಬಿಬಿಎಂಪಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ವಲಯವಾರು ಮೊದಲ 50 ಮಂದಿಯ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ.

₹4 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಮಾಡುವುದಕ್ಕೆ ಪಣತೊಟ್ಟಿದ್ದು, ಆರ್ಥಿಕ ವರ್ಷ ಮುಕ್ತಾಯಕ್ಕೆ ಸುಮಾರು 50 ದಿನ ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಆಸ್ತಿ ತೆರಿಗೆ ವಸೂಲಿ ಕಾರ್ಯವನ್ನು ಬಿಬಿಎಂಪಿ ಕಂದಾಯ ವಿಭಾಗವನ್ನು ಇನ್ನಷ್ಟು ಚುರುಕುಗೊಳಿಸಿದ್ದು, ಇದೀಗ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರು ಅಥವಾ ಸಂಘ ಸಂಸ್ಥೆಗಳ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಉದ್ದೇಶಿಸಿದೆ.

ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ:

ಬಿಬಿಎಂಪಿಯ ಎಂಟು ವಲಯದ ಜಂಟಿ ಆಯುಕ್ತರಿಗೆ ಹಾಗೂ ಕಂದಾಯ ವಿಭಾಗದ ಉಪ ಆಯುಕ್ತರಿಗೆ ತಮ್ಮ ತಮ್ಮ ವಲಯದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮೊದಲ 50 ಸುಸ್ತಿದಾರರ ಪಟ್ಟಿಯನ್ನು ಸಿದ್ಧಪಡಿಸಿ ಗುರುವಾರ ಸಂಜೆ ಒಳಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ವೆಬ್‌ ಸೈಟ್‌, ವಲಯ ಕಚೇರಿಯಲ್ಲಿ ಪ್ರಕಟ:

ಮೊದಲ 50 ಮಂದಿ ಸುಸ್ತಿದಾರರ ಪಟ್ಟಿಯನ್ನು ಬಿಬಿಎಂಪಿಯ ವೆಬ್‌ ಸೈಟ್‌ ಹಾಗೂ ಪಾಲಿಕೆಯ ಎಂಟು ವಲಯದ ಕಚೇರಿಯಲ್ಲಿ ಶುಕ್ರವಾರ ಪ್ರಕಟಿಸುವ ಸಾಧ್ಯತೆ ಇದೆ.