ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ, ದನ-ಕರುಗಳ ಮೈತೊಳೆದು ಶುಚಿಗೊಳಿಸುವುದರೊಂದಿಗೆ ಸಂಕ್ರಾಂತಿಗೆ ವಿಶೇಷ ಕಳೆ ತರಲು ಸನ್ನದ್ಧರಾಗುತ್ತಿದ್ದಾರೆ.
ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಎಪಿಎಂಸಿ, ಹಳೇ ಬಸ್ ನಿಲ್ದಾಣ, ಎಂ.ಜಿ.ರಸ್ತೆ ಗಳಲ್ಲಿ ಜನಜಂಗುಳಿ ತುಂಬಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಬಂದ ಜನರು ಹಬ್ಬದ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ರೈತರು ಜಾನುವಾರುಗಳಿಗೆ ಹೊಸ ಹಗ್ಗ, ಕರಿದಾರ, ಗೆಜ್ಜೆ, ಕೊರಳಿಗೆ ಕಟ್ಟುವ ಗಂಟೆ, ಗೊಂಡದ ಹಾರ, ಚಗರೆಯಿಂದ ಮಾಡಿದ ಹಗ್ಗ ಸೇರಿದಂತೆ ಅವುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.ಹಳೇ ಬಸ್ ನಿಲ್ದಾಣ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಎಳ್ಳು-ಬೆಲ್ಲ ವ್ಯಾಪಾರದ ಭರಾಟೆ ಜೋರಾಗಿತ್ತು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣಸೇವೆಗೆ ಹೆಚ್ಚಿನ ಬೇಡಿಕೆ ಇತ್ತು. ಮಿಕ್ಸ್ ಎಳ್ಳು-ಬೆಲ್ಲ ಪ್ರತಿ ಕೆಜಿಗೆ 200 ರು., ಹುರಿಗಡಲೆ - 150 ರು., ಬಿಳಿ ಎಳ್ಳು- 250 ರು., ಸಕ್ಕರೆ ಅಚ್ಚು- 200 ರು., ಬೆಲ್ಲದ ಅಚ್ಚು- 70 ರಿಂದ 80 ರು., ಕಲ್ಯಾಣಸೇವೆ 100 ರು.ಗೆ ಮಾರಾಟವಾಗುತ್ತಿತ್ತು. ಅವರೆ ಕಾಯಿ ಕೆಜಿ 100 ರು., ಗೆಣಸು ಕೆಜಿ 50 ರು., ಕಡಲೆ ಕಾಯಿ ಸೇರಿಗೆ 50 ರುಪಾಯಿಗಳಿಗೆ ಮಾರಾಟ ಆಗುತ್ತಿತ್ತು.ಸಂಕ್ರಾಂತಿಯ ಮತ್ತೊಂದು ವಿಶೇಷ ಕಬ್ಬು. ಕಬ್ಬಿನ ಜೊಲ್ಲೆಗಳನ್ನು ಇಟ್ಟುಕೊಂಡು ರೈತರು ವ್ಯಾಪಾರದಲ್ಲಿ ನಿರತರಾಗಿದ್ದರು. ಸೊಗಸಾಗಿ ಬೆಳೆದು ಕಬ್ಬಿನ ರಸವನ್ನು ತುಂಬಿಕೊಂಡಿದ್ದ ಒಂದು ಕಬ್ಬಿನ ಜೊಲ್ಲೆ 50 ರು. ಬೆಲೆ ಇತ್ತು. ಜಾನುವಾರುಗಳಿಗೆ ಕಟ್ಟುವ ಉದ್ದನೆಯ ಹಗ್ಗ ಕನಿಷ್ಠ 50 ರಿಂದ 100 ರು.ಗೆ ಮಾರಾಟವಾಗುತ್ತಿತ್ತು. ಮೂಗುದಾರ ಜೊತೆ 30 ರು.ನಿಂದ 60 ರು., ಹಸುವಿನ ಕೊರಳಿಗೆ ಕಟ್ಟುವ ಗಂಟೆ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಕನಿಷ್ಠ 25 ರಿಂದ 600 ರು.ವರೆಗೆ ಇತ್ತು. ಕೊರಳಿಗೆ ಕಟ್ಟುವ ವಿವಿಧ ಗಾತ್ರದ ಗಂಟೆಗಳನ್ನು ಒಳಗೊಂಡ ಹಗ್ಗ ಜೊತೆಗೆ 300 ರು.ನಿಂದ 400 ರು.ವರೆಗೆ ಮಾರಾಟ ಮಾಡುತ್ತಿದ್ದರು.ಹಬ್ಬದ ಕಾರಣದಿಂದ ಹೂವಿನ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಮಲ್ಲಿಗೆ ಹೂವು ಕೆಜಿ 200 ರು, ಕನಕಾಂಬರ ಕೆಜಿಗೆ 300 ರು., ಮರಳೆ ಹೂ- 120 ರು., ಚೆಂಡು ಹೂ - 60 ರು., ಗುಲಾಬಿ ಬಟನ್ 100 ಗ್ರಾಂಗೆ 40 ರು., ಸುಗಂಧರಾಜ ಹಾರ ಜೊತೆ 400 ರಿಂದ 2000 ರು., ಪ್ರತಿ ಮಾರು ಸೇವಂತಿಗೆ - 80 ರು. ಗಡಿ ತಲುಪಿತ್ತು. ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಗಳಿಗಿಂತ 10 ರಿಂದ 20 ರು. ದುಬಾರಿಯಾಗಿತ್ತು. ಸೇಬು 140 ರು.ನಿಂದ 200 ರು., ಮೂಸಂಬಿ ಪ್ರತಿ ಕೆಜಿಗೆ 80 ರಿಂದ 100 ರು., ದ್ರಾಕ್ಷಿ - 100 ರು.ನಿಂದ 160 ರು., ದಾಳಿಂಬೆ - 100 ರು.ನಿಂದ 160 ರು., ಕಿತ್ತಳೆ- 60 ರು.ನಿಂದ 100 ರು., ಬಾಳೆಹಣ್ಣು - 80 ರು.ನಿಂದ 100 ರು., ಮಿಕ್ಸ್ ಹಣ್ಣು - 160 ರು. ಇತ್ತು.
ನಗರ ಪ್ರದೇಶದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ತಯಾರಿಯಲ್ಲಿ ತೊಡಗಿಸಿಕೊಂಡು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಕ್ಕಳು ಹೊಸಬಟ್ಟೆಯನ್ನು ತೊಟ್ಟು, ಎಳ್ಳು-ಬೆಲ್ಲ ವಿನಿಮಯ ಮಾಡುವ ಸಂಭ್ರಮದಲ್ಲಿದ್ದರು. ಅದಕ್ಕಾಗಿ ಸಡಗರದ ತಯಾರಿ ನಡೆಸಿದ್ದರು.