ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ ಜನರು ಸಕಲ ಸಿದ್ದತೆಯಲ್ಲಿ ತೊಡಗಿದ್ದು, ಭಾನುವಾರ ರಾತ್ರಿಯಿಂದ ಬೆಳಕಿನ ಹಬ್ಬ ದೀಪಾವಳಿ ಪ್ರಾರಂಭವಾಗಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳತ್ತ ಮುಖಮಾಡಿ ಸಾಮಾಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ ಜನರು ಸಕಲ ಸಿದ್ದತೆಯಲ್ಲಿ ತೊಡಗಿದ್ದು, ಭಾನುವಾರ ರಾತ್ರಿಯಿಂದ ಬೆಳಕಿನ ಹಬ್ಬ ದೀಪಾವಳಿ ಪ್ರಾರಂಭವಾಗಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳತ್ತ ಮುಖಮಾಡಿ ಸಾಮಾಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ಈ ಸಂಭ್ರಮದ ದೀಪಾವಳಿ ಆಚರಣೆಗೆ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ, ಪಟಾಕಿಗಳ ಬೆಲೆ ಬರದ ನಡುವೆ ಆತಂಕ ಮೂಡಿಸಿದ್ದರೂ, ಮಕ್ಕಳು ಬಹಳ ಖುಷಿಯಿಂದ ತಮ್ಮ ಪೋಷಕರ ಜತೆ ಪಟಾಕಿ ಅಂಗಡಿಗಳಿಗೆ ಬಂದು ಪಟಾಕಿಗಳನ್ನು ಖರೀದಿಸುತ್ತಿದ್ದರು.

ದೀಪಾವಳಿ ದೊಡ್ಡ ಮತ್ತು ಭವ್ಯವಾದ ಹಬ್ಬಗಳಲ್ಲಿ ಒಂದಾಗಿದೆ. ದೀಪಾವಳಿಯು ಸಂತೋಷ, ದೀಪಾವಳಿ ಎಂದರೆ ಬೆಳಕಿನ ಹಬ್ಬ ವಿಜಯ ಮತ್ತು ಸಾಮರಸ್ಯವನ್ನು ಗುರುತಿಸಲು ಸ್ಮರಿಸುವ ಹಬ್ಬವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.

ಪಟಾಕಿ ವ್ಯಾಪಾರ ಬಲು ಜೋರು:

ಜಿಲ್ಲಾ ಕೇಂದ್ರ ಚಾಮರಾಜನಗರದ ಖಾಸಗಿ ಬಸ್ ನಿಲ್ಚಾಣದ ಅವರಣದಲ್ಲಿ ಪಟಾಕಿ ಅಂಗಡಿಗಳು ಹಾಗೂ ಅಂಗಡಿ ಬೀದಿಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿಯೇ ಇತ್ತು, ಪಟಾಕಿ ಅಂಗಡಿಗಳ ಮುಂದೆ ವ್ಯಾಪಾರದ ಭರಾಟೆ ಬಲು ಜೋರಾಗಿಯೇ ಇತ್ತು.

ಹೂವು, ಬಾಳೆಹಣ್ಣು, ಅಲಂಕಾರಿಕ ವಸ್ತುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದರೂ, ಸಡಗರದ ದೀಪಾವಳಿಗೆ ಜನರು ಅಗತ್ಯ ವಸ್ತುಗಳು, ಮಣ್ಣಿನ ಹಣತೆ ದೀಪಗಳನ್ನು ಖರೀದಿಸುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡುಬಂತು.

ಭಾನುವಾರ ಬೆಳಿಗ್ಗೆಯಿಂದಲೇ ವಸ್ತುಗಳನ್ನು ಖರೀದಿಸಲು ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಹಳೆ ಖಾಸಗಿ ಬಸ್ ನಿಲ್ದಾಣದ ಅಂಗಡಿಗಳು, ಪಟಾಕಿ ಅಂಗಡಿಗಳಿಗೆ ಮುಗಿಬಿದ್ದರು.

ರಾಜಸ್ತಾನಿ ಬಾಂಧವರು, ಚಿನ್ನ ಮತ್ತು ಬೆಳ್ಳಿ ವ್ಯಾಪಾರಗಾರರಿಗೆ ದೀಪಾವಳಿ ದೊಡ್ಡ ಹಬ್ಬ ಅದಕ್ಕಾಗಿ ತಮ್ಮ ಅಂಗಡಿ ಮಳಿಗೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಪೂಜೆ ನೆರವೇರಿಸಿ, ತಮ್ಮ ಗ್ರಾಹಕರಿಗೆ ಸಿಹಿ ವಿತರಿಸುತ್ತಿದ್ದರು.

ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ದೀಪಾವಳಿ ಜಾತ್ರೆ, ಮಹಾ ರಥೋತ್ಸವ ನಡೆಯುತ್ತಿರುವುದರಿಂದ ಭಕ್ತರು ತಂಡೋಪತಂಡವಾಗಿ ಮಹದೇಶ್ವರನ ಬೆಟ್ಟಕ್ಕೆ ತೆರಳುತ್ತಿದ್ದರು.