ಶಿಥಿಲ ಕಟ್ಟಡದಲ್ಲಿ ಐಸ್‌ ಕ್ರೀಂ ತಯಾರಿ: ಪಾಲಿಕೆಗೆ ನೋಟಿಸ್‌

| Published : Mar 30 2024, 01:16 AM IST

ಶಿಥಿಲ ಕಟ್ಟಡದಲ್ಲಿ ಐಸ್‌ ಕ್ರೀಂ ತಯಾರಿ: ಪಾಲಿಕೆಗೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಶೇಷಾದ್ರಿಪುರದ ರಾಜಕಾಲುವೆಯ ಪಕ್ಕದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದರಲ್ಲಿ ಖಾಸಗಿ ವ್ಯಕ್ತಿಗಳು ಫಲುಡಾ, ಐಸ್ ಕ್ರೀಂ, ಬಾದಾಮ್ ಹಾಲು ಉತ್ಪಾದನೆ ಘಟಕ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಬಿವಿಎಂಪಿಗೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಶೇಷಾದ್ರಿಪುರದ ರಾಜಕಾಲುವೆಯ ಪಕ್ಕದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದರಲ್ಲಿ ಖಾಸಗಿ ವ್ಯಕ್ತಿಗಳು ಫಲುಡಾ, ಐಸ್ ಕ್ರೀಂ, ಬಾದಾಮ್ ಹಾಲು ಉತ್ಪಾದನೆ ಘಟಕ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಬಿವಿಎಂಪಿಗೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.

ಈ ಕುರಿತಂತೆ ವಕೀಲ ಎನ್‌.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ, ಬಿಬಿಎಂಪಿ ಆಯುಕ್ತರು, ಆರೋಗ್ಯ ವಿಭಾಗದ ಸಕ್ಷಮ ಅಧಿಕಾರಿ, ಪಶ್ಚಿಮ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ, ಶೇಷಾದ್ರಿಪುರ ಪೊಲೀಸ್‌ ಇನ್ಸ್‌ಪೆಕ್ಟರ್‌, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತು ಶಿಥಿಲಾವಸ್ಥೆ ಕಟ್ಟಡದ ಮಾಲೀಕ ಎನ್ನಲಾದ ಟಿ.ಲಿಂಗಪ್ಪ ಸೇರಿದಂತೆ ಅರ್ಜಿಯಲ್ಲಿನ ಇತರೆ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.

ನಗರದ ಶೇಷಾದ್ರೀಪುರಂ ರಾಜಕಾಲುವೆ ಬಳಿ ಶಿಥಿಲಾವಸ್ಥೆಯಲ್ಲಿ ಇರುವ ಕಟ್ಟಡದಲ್ಲಿ ಫಲುಡಾ, ಐಸ್ ಕ್ರೀಂ, ಬಾದಾಮ್ ಹಾಲು ಹಾಗೂ ಇತರೆ ಪಾನೀಯಾಗಳು ತಯಾರಿಸಿ ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ತಯಾರಿಕಾ ಘಟಕ ನಡೆಸುತ್ತಿರುವ ಕಟ್ಟಡದ ಮುಂದೆಯೇ ಸಾರ್ವಜನಿಕರು ತ್ಯಾಜ್ಯ ಬಿಸಾಡುತ್ತಿದ್ದಾರೆ. ಅದರ ನಡುವೆ ಆಹಾರ ಪದಾರ್ಥ ಸಿದ್ಧಪಡಿಸಲಾಗುತ್ತಿದೆ. ಪಾನೀಯಗಳ ತಯಾರಿಕೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಮಾನದಂಡ ಪಾಲಿಸುತ್ತಿಲ್ಲ. ಸ್ವಲ್ಪವೂ ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ. ಘಟಕವು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಆಹಾರ ಪದಾರ್ಥ ತಯಾರಿಸುತ್ತಿರುವ ಘಟಕವಿರುವ ಈ ಕಟ್ಟಡ ಪಾಳು ಬಿದ್ದಿರುವ ಹಿನ್ನೆಲೆಯಲ್ಲಿ ಅದನ್ನು ನೆಲಸಮಗೊಳಿಸುವಂತೆ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ಸೂಚಿಸಿತ್ತು. ಈ ಎಲ್ಲ ವಿಚಾರಗಳ ಕುರಿತು ಸಂಪೂರ್ಣ ಮಾಹಿತಿ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳೆದ ಆರು ತಿಂಗಳಿಂದ ಪದೇ ಪದೇ ದೂರು ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಘಟಕದ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.