ಮುಂಗಾರು ಬಿತ್ತನೆಗೆ ಅನ್ನದಾತರ ಸಿದ್ಧತೆ

| Published : May 25 2024, 12:47 AM IST

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದರೆ ಬಂಪರ್‌ ಬೆಳೆ ತೆಗೆಯುವ ಆಶಾಭಾವದಿಂದ ರೈತ ಸಮುದಾಯ ಬಿತ್ತನೆಗೆ ಬೇಕಾದ ಬೀಜ,ಗೊಬ್ಬರ ಖರೀದಿಯಲ್ಲಿ ತೊಡಗಿದ್ದು

ಎಸ್.ಜಿ.ತೆಗ್ಗಿನಮನಿ ನರಗುಂದ

ತಾಲೂಕಿನ ಕೆಲವು ಪ್ರದೇಶದಲ್ಲಿ ವಾರದಿಂದ ಅಲ್ಪಸ್ವಲ್ಪ ಮುಂಗಾರು ಪೂರ್ವ ಮಳೆ ಬಿದ್ದ ಪರಿಣಾಮ ರೈತರು ಬಿತ್ತನೆಗೆ ಬೇಕಾದ ರಸ ಗೊಬ್ಬರಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದರು. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದರೆ ಬಂಪರ್‌ ಬೆಳೆ ತೆಗೆಯುವ ಆಶಾಭಾವದಿಂದ ರೈತ ಸಮುದಾಯ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದು ಕಂಡು ಬರುತ್ತಿದೆ.

ತಾಲೂಕಿನ ಭೌಗೋಳಿಕ ಕ್ಷೇತ್ರ 50,32260 ಹೆಕ್ಟೇರ್‌ ಪ್ರದೇಶದಲ್ಲಿ ಸಾಗುವಳಿ ಕ್ಷೇತ್ರ 40,752 ಹೆಕ್ಟೇರ್‌, ಮುಂಗಾರು ಬಿತ್ತನೆ ಮಾಡುವ ಕ್ಷೇತ್ರ 38,700 ಹೆಕ್ಟೇರ್‌ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿಟಿ ಹತ್ತಿ, ಈರಳ್ಳಿ, ಕಬ್ಬು, ತೊಗರಿ, ಮೆಣಸಿನಕಾಯಿ ಬಿತ್ತನೆ ಮಾಡುವ ಗುರಿ ಕೃಷಿ ಇಲಾಖೆ ಹೊಂದಿದೆ.

ತಾಲೂಕಿನಲ್ಲಿ ಉತ್ತಮ ಮಳೆಯಾಗುವ ಲಕ್ಷಣ ಕಂಡು ಬರುತ್ತಿದ್ದು, ಆದ್ದರಿಂದ ಖಾಸಗಿ ವ್ಯಾಪಾರಸ್ಥರು ಬಿತ್ತನೆ ಬೀಜ, ಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಮತ್ತು ಕಡ್ಡಾಯವಾಗಿ ಬೋರ್ಡ್‌ ಮೇಲೆ ಬೀಜ, ಗೊಬ್ಬರದ ಬೆಲೆ ಬರೆಯಬೇಕು ಎಂದು ಎಲ್ಲ ವ್ಯಾಪಾರಸ್ಥರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಯಾರಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದೆ.

ಕಳೆದ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆ ರೈತರು ಸಂಕಷ್ಟದಲ್ಲಿದ್ದು, ಕೃಷಿ ಅಧಿಕಾರಿಗಳು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಸಂಗ್ರಹಿಸಿಟ್ಟುಕೊಂಡು ಸಕಾಲಕ್ಕೆ ರೈತರಿಗೆ ವಿತರಿಸಬೇಕು ಎಂದು ರಾಜ್ಯ ರೈತ ಸೇನೆ ಸಂಘಟನೆ ಅಧ್ಯಕ್ಷ ವಿರೇಶ ಸೊಬರದಮಠ ತಿಳಿಸಿದ್ದಾರೆ.

ಮುಂಗಾರು ಬಿತ್ತನೆಗೆ ಬೇಕಾದ ಡಿಎಪಿ, ಪೋಟ್ಯಾಶ್, ಯೂರಿಯಾ ಗೊಬ್ಬರ ಒಟ್ಟು 2778 ಟನ್‌ ಖಾಸಗಿ ವ್ಯಾಪಾರಸ್ಥರ ಹತ್ತಿರ ಸಂಗ್ರಹವಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ತರಲಾಗುವುದು ಎಂದು ತಾಲೂಕು ಸಹಾಯಕ ನಿರ್ದೇಶಕ ಗುರುನಾಥ ಎಂ.ಬಿ, ಹೇಳಿದರು.