ಸಾರಾಂಶ
ಸರ್ಕಾರಕ್ಕೆ ಸ್ವರ್ಣವಲ್ಲೀ ಶ್ರೀಗಳ ಒತ್ತಾಯ । ನದಿ ತೀರಗಳಲ್ಲಿ ರ‍್ಯಾಲಿ, ಜಾಗೃತಿ ಸಭೆಗಳ ದಿನಾಂಕ ನಿರ್ಧಾರ
ಕನ್ನಡಪ್ರಭ ವಾರ್ತೆ ಶಿರಸಿಸೋಂದಾ ಸ್ವಣವಲ್ಲೀ ಸುಧರ್ಮ ಸಭಾಂಗಣದಲ್ಲಿ ನಡೆದ ಬೇಡ್ತಿ ಸಮಿತಿ ಪದಾಧಿಕಾರಿಗಳ ಸಭೆ ನಿರಂತರ ಜನಾಂದೋಲನದ ತಯಾರಿ ನಡೆಸಿತು.
ಸಮಿತಿ ಗೌರವಾಧ್ಯಕ್ಷ ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶ ಗಂಗಾಧರೇದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ಸರ್ಕಾರ ಬೇಡ್ತಿ-ವರದಾ, ಅಘನಾಶಿನಿ ವೇದಾವತಿ ನದಿ ಜೋಡಣೆ ಯೋಜನೆ ತಯಾರಿ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಬೇಡ್ತಿ-ಅಘನಾಶಿನಿ ಕಣಿವೆಗಳ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮಾಡಲು ಹಲವು ಹಂತಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. 2026ರ ಜ. 11ರಂದು ಶಿರಸಿಯಲ್ಲಿ ಬೃಹತ್ ಜನ ಸಮಾವೇಶ ನಡೆಸಲು ನಿರ್ಣಯಿಸಲಾಗಿದೆ ಎಂದು ಪ್ರಕಟಿಸಿದರು. ಜನಪ್ರತಿನಿಧಿಗಳ ಸಂಪರ್ಕ ಆಗಿದೆ. ಅವರು ನಮ್ಮ ಬೇಡ್ತಿ ಜನಾಂದೋಲನ ಬೆಂಬಲಿಸಿದ್ದಾರೆ ಎಂದು ಶ್ರೀ ತಿಳಿಸಿದರು.
ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಸದ್ಯ ಬೇಡ್ತಿ, ಅಘನಾಶಿನಿ ಫೈಲ್‌ಗಳು ರಾಜ್ಯ (ನೀರಾವರಿ ಇಲಾಖೆ) ಸರ್ಕಾರದ ಅಂಗಳದಲ್ಲಿದೆ. ಬೇಡ್ತಿ-ವರದಾ ಯೋಜನೆಯ ಪ್ರೀ-ಫಿಸಿಬಿಲಿಟಿ ರಿಪೋರ್ಟ್ ತಯಾರಾಗಿದೆ. ಡಿಪಿಆರ್ ತಯಾರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೂ ಮನವಿ ಮಾಡಿಲ್ಲ. ಈ ಆರಂಭಿಕ ಹಂತದಲ್ಲೇ ಜಿಲ್ಲೆಯ ಜನಪ್ರತಿನಿಧಿಗಳು ಒಟ್ಟಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಬೇಡ್ತಿ-ವರದಾ ಯೋಜನೆ ತಿರುವು ಯೋಜನೆಗಳ ತಯಾರಿ ಕುರಿತು ಲಭ್ಯ ಮಾಹಿತಿ ಫೋಟೋ, ನಕ್ಷೆಗಳನ್ನು ಬಹಿರಂಗ ಪಡಿಸಿದರು.ಅಘನಾಶಿನಿ ಕಣಿವೆ ಪ್ರದೇಶದ ಸಂಚಾಲಕ ಡಾ. ಬಾಲಚಂದ್ರ ಸಾಯಿಮನೆ ಹಾಗೂ ಗೋಪಾಲಕೃಷ್ಣ ತಂಗಾರ್ಮನೆ ಮಾತನಾಡಿ, ಸದ್ಯದಲ್ಲೇ ಶ್ರೀಮನ್ನೆಲಮಾವು ಮಠದಲ್ಲಿ ಸಭೆ ನಡೆಸಲಿದ್ದೇವೆ. ಅಘನಾಶಿನಿ ಕಣಿವೆ ಜನತೆ ಹೊಸ ಯೋಜನೆ ಬಗ್ಗೆ ಸುದ್ದಿ ತಿಳಿದು ಅಘಾತಗೊಂಡಿದ್ದಾರೆ ಎಂದು ತಿಳಿಸಿದರು. ಶಾಲ್ಮಲಾ ನದಿ ದಡದಲ್ಲಿ ಸಹಸ್ರಲಿಂಗದಲ್ಲಿ ಅ.16ರಂದು ರ‍್ಯಾಲಿ ನಡೆಸುವ ವಿವರವನ್ನು ಸಂಚಾಲಕ ಅನಂತ ಭಟ್ ಹುಳಗೋಳ ತಿಳಿಸಿದರು. ಬೇಡ್ತಿ ನದೀ ಸಮೀಪ ತುಂಬೇಬೀಡನಲ್ಲಿ ಅ.23 ಬೆಳಗ್ಗೆ ರ‍್ಯಾಲಿ-ಸಭೆ ನಡೆಸುವ ವಿಷಯವನ್ನು ಸಂಚಾಲಕ ನರಸಿಂಹ ಸಾತೊಡ್ಡಿ ವಿವರಿಸಿದರು. ಅ.27ರಂದು ವಾನಳ್ಳಿಯಲ್ಲಿ ಸಭೆ ನಡೆಯಲಿದೆ ಎಂದು ಸಂಚಾಲಕ ರಾಜಾರಾಮ ತಿಳಿಸಿದರು.
ಪಟ್ಟಣದ ಹೊಳೆ ಬಳಿ ಎಫ್‌ಡಿ ಮಠದಲ್ಲಿ ಸಭೆ ನಡೆಸುವ ವಿಷಯವನ್ನು ರಾಯಪ್ಪಣ್ಣ ತಿಳಿಸಿದರು. ಪಟ್ಟಣದ ಹೊಳೆಗುಂಟ ನಡೆಸುವ ಪಾದಯಾತ್ರೆ ಬಗ್ಗೆ ಎನ್.ಆರ್. ಹೆಗಡೆ ತಿಳಿಸಿದರು. ಡಾ. ಕೇಶವ ಕೊರ್ಸೆ ನ.23ರಂದು ಶಿರಸಿಯಲ್ಲಿ ವಿಜ್ಞಾನಿಗಳ ಸಮ್ಮೇಳನದಲ್ಲಿ ಪಶ್ಚಿಮ ಘಟ್ಟದ ಮೇಲೆ ನದೀ ಜೋಡಣೆ ಸೇರಿದಂತೆ ಬೃಹತ್ ಯೋಜನೆಗಳ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲಿದ್ದೇವೆ ಎಂದರು.ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕೇಂದ್ರ ಮಾತೃ ಮಂಡಳಿಯ ಗೀತಾ ಶೀಗೆಮನೆ, ಟಿ.ಆರ್. ಹೆಗಡೆ, ಮಾಗೋಡು ವೆಂಕಟ್ರಮಣ, ಎಂ.ಕೆ. ಭಟ್, ಸೂರ್ಯ ಹಿತ್ಲಳ್ಳಿ, ಶ್ರೀಪಾದ ಶಿರನಾಲ, ಸುರೇಶ ಹಕ್ಕಿಮನೆ, ಆರ್.ಎಸ್. ಹೆಗಡೆ ಮಣ್ಮನೆ, ಗಣಪತಿ ನೀರಗಾನ, ಈಶ್ವರ ಹಸ್ರಗೋಡ, ಎಂ.ಜಿ. ಗೆಜ್ಜೆ ಕಿಬ್ಬಳ್ಳಿ, ಮಂಜುನಾಥ ಭಂಡಾರಿ, ಡಾ. ಜಿ.ವಿ. ಹೆಗಡೆ, ತಮ್ಮಾ ಕುಣಬಿ, ನಾಗೇಶ ನಾಯ್ಕ, ರಾಜು ಪೂಜಾರಿ ಮತ್ತಿತರರು ಇದ್ದರು. 15 ಗ್ರಾಪಂಗಳು, 20 ಸಹಕಾರಿ ಸಂಘಗಳು ಬೇಡ್ತಿ ವರದಾ ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡ ದಾಖಲೆಗಳು ಇಂದು ಮಂಡಿತವಾಗಿವೆ ಎಂದು ಸಂಚಾಲಕ ಗಣಪತಿ ಕೆ. ತಿಳಿಸಿದರು.