ವರಮಹಾಲಕ್ಷ್ಮೀ ಹಬ್ಬಕ್ಕೆ ಎಲ್ಲೆಡೆ ಸಡಗರದ ಸಿದ್ಧತೆ

| Published : Aug 08 2025, 01:00 AM IST

ಸಾರಾಂಶ

ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಬಗೆ ಬಗೆಯ ತಿಂಡಿ-ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ಪ್ರಯುಕ್ತ ಹೂವು-ಹಣ್ಣಿನ ಬೆಲೆ ಕೊಂಚ ದುಬಾರಿಯಾಗಿದೆ.

ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರಶ್ರಾವಣ ಮಾಸ ಆರಂಭದ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಹೀಗಾಗಿ ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಮೂಡಿದ್ದು, ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಭರಾಟೆ ಜೋರಾಗಿದೆ.ಲಕ್ಷ್ಮೀಯನ್ನು ಪ್ರತಿಷ್ಠಾಪಿಸಲು ಸುಮಂಗಲಿಯರು-ಯುವತಿಯರು ಸಂಭ್ರಮ-ಸಡಗರದ ಸಿದ್ಧತೆ ನಡೆಸಿದ್ದಾರೆ. ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ ಬಗೆ ಬಗೆಯ ತಿಂಡಿ-ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ಪ್ರಯುಕ್ತ ಹೂವು-ಹಣ್ಣಿನ ಬೆಲೆ ಕೊಂಚ ದುಬಾರಿಯಾಗಿದೆ.ನಗರದ ಎಂ.ಜಿ.ರಸ್ತೆ, ಹಳೇ ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹೂವು-ಹಣ್ಣು, ಬಾಳೆಕಂದು, ತಾವರೆ ಹೂವಿನ ವ್ಯಾಪಾರದ ಭರಾಟೆ ಜೋರಾಗಿತ್ತು. ಬಹುತೇಕರು ಬುಧವಾರವೇ ಹಬ್ಬದ ವಸ್ತುಗಳ ಖರೀದಿ ಮಾಡಿಕೊಂಡಿದ್ದರೆ. ಇನ್ನೂ ಹಲವರು ಗುರುವಾರ ಬೆಳಗ್ಗೆಯಿಂದಲೇ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.ಹೂವು-ಹಣ್ಣು ಬೆಲೆ ದುಪ್ಪಟ್ಟು:ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿರುವುದು ಕಂಡುಬಂದಿತು. ಮಿಕ್ಸ್ ಹಣ್ಣು ಪ್ರತಿ ಕೆಜಿಗೆ 200 ರು., ಸೇಬು 200 - 260 ರು., ಮೊಸಂಬಿ - 100 - 140ರು., ಕಿತ್ತಳೆ - 160 - 200 ರು., ದಾಳಿಂಬೆ 200- 250 ರು., ಮರಸೇಬು - 100 ರು., ಏಲಕ್ಕಿ ಬಾಳೆ ಹಣ್ಣು- 140 ರು., ಪಚ್ಚಬಾಳೆ - 100 ರು., ದ್ರಾಕ್ಷಿ- 150 ರು., ಮಾವಿನ ಹಣ್ಣು - 150 ರು., ಅನಾನಸ್ ಒಂದಕ್ಕೆ 50 ರು., ಡ್ರ್ಯಾಗನ್ ಫ್ರೂಟ್ - 120 ರು., ಸೀತಾಫಲ - 100 ರು,ಗೆ ಮಾರಾಟವಾಗುತ್ತಿತ್ತು.

ಇನ್ನು ಸೇವಂತಿಗೆ ಹೂವು ಪ್ರತಿ ಮಾರಿಗೆ 200 ರು., ಮಲ್ಲಿಗೆ ಕೆಜಿ - 2,500, ಮಲ್ಲಿಗೆ ಹಾರ 500 ರಿಂದ 2 ಸಾವಿರ ರು., ಕಾಕಡಾ - 200 ರು., ಬಿಡಿ ಹೂ 100 ಗ್ರಾಂಗೆ 80 ರು., ಮಾವಿನ ಸೊಪ್ಪು ಜೊತೆ 20 ರು., ಬಾಳೆ ಕಂದು 100 ರು., ತಾವರೆ ಹೂ ಜೊತೆ 100 ರಿಂದ 120 ರು.ಗೆ ಮಾರಾಟವಾಗುತ್ತಿತ್ತು.ತರಕಾರಿ ಬೆಲೆಯಲ್ಲೂ ಏರಿಕೆ:ತರಕಾರಿ ಬೆಲೆಯೂ ಸಾಮಾನ್ಯದರದಲ್ಲೇ ಇತ್ತು. ಪ್ರತಿ ಕೆಜಿ ಮಿಕ್ಸ್ ತರಕಾರಿ 60 ರು., ಬೀನಿಸ್- 80, ಕ್ಯಾರೆಟ್ - 80, ಗಡ್ಡೆಕೋಸು - 60 ರು., ದಪ್ಪ ಮೆಣಸಿನಕಾಯಿ - 80 ರು., ಅವರೆಕಾಯಿ - 100 (ಎರಡೂವರೆ ಕೆಜಿ) ರು., ಪ್ರತಿ ಕೆಜಿಗೆ ಟಮೋಟೋ - 40, ನುಗ್ಗೆಕಾಯಿ - 40 ರು. ಬೀಟ್‌ರೋಟ್ - 50, ಸಬ್ಬಸಿಗೆ ಸೊಪ್ಪು ಪ್ರತಿ ಕಟ್ಟಿಗೆ 10 ರು., ಮೆಂತ್ಯ ಸೊಪ್ಪು- 10 ರಿಂದ 20 ರು.ನಂತೆ ಮಾರಾಟವಾಗುತ್ತಿತ್ತು.ನೈವೇದ್ಯಕ್ಕೆ ತಿನಿಸುಗಳ ತಯಾರಿ :ಲಕ್ಷ್ಮೀಪೂಜೆಗಾಗಿ ವಿವಿಧ ಮಾದರಿಯ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಸಕ್ಕರೆ ಮಿಠಾಯಿ, ರವೆಉಂಡೆ, ಹೋಳಿಗೆ, ಚಕ್ಕುಲಿ, ಕೋಡುಬಳೆ, ಕಜ್ಜಾಯ, ಕರ್ಜಿಕಾಯಿ, ಬಾದಾಮಿ, ಕರ್ಜೂರ, ಒಣದ್ರಾಕ್ಷಿ, ಗೋಡಂಬಿ, ಕಲ್ಲುಸಕ್ಕರೆ ಜೊತೆಗೆ ಗೋಧಿ ಪಾಯಸ, ಕಡಲೆಬೇಳೆ ಪಾಯಸ, ಹೆಸರುಬೇಳೆ ಪಾಯಸವನ್ನು ನೈವೇದ್ಯ ರೂಪದಲ್ಲಿಡುವ ಖಾದ್ಯಗಳ ತಯಾರಿಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದರು.ಇತ್ತೀಚಿನ ದಿನಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಗ್ರಾಮೀಣ ಪ್ರದೇಶದ ಜನರ ಮೇಲೂ ಪ್ರಭಾವ ಬೀರಿದ್ದು, ಹಳ್ಳಿಯಿಂದಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಬ್ಬಕ್ಕೆ ಅಗತ್ಯವಾಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದು ಕಂಡುಬಂದಿತು. ...ಬಾಕ್ಸ್ ...

ಬೆಳ್ಳಿಯ ಲಕ್ಷ್ಮೀ ಮುಖವಾಡಕ್ಕೆ ಬೇಡಿಕೆ

ಲಕ್ಷ್ಮೀಯನ್ನು ಪ್ರತಿಷ್ಠಾಪನೆ ಮಾಡುವವರು ಬೆಳ್ಳಿಯಿಂದ ತಯಾರಿಸಿದ ಲಕ್ಷ್ಮೀ ಮುಖವಾಡ ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದರು. ವರಮಹಾಲಕ್ಷ್ಮೀ ಹಬ್ಬದ ವೇಳೆ ವರಮಹಾಲಕ್ಷ್ಮೀಯ ಬೆಳ್ಳಿ ಮುಖವಾಡಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಆಭರಣ ತಯಾರಕರೂ ಸಹ ವಿವಿಧ ಗಾತ್ರದ ಲಕ್ಷ್ಮೀ ಮುಖವಾಡಗಳನ್ನು ಮಾರಾಟಕ್ಕಿಟ್ಟಿದ್ದರು. ಲಕ್ಷ್ಮೀಯ ಮುಖವಾಡ ಖರೀದಿಸಿದ ಮಹಿಳೆಯರು ನಂತರದಲ್ಲಿ ಕುಶಲ ಕರ್ಮಿಗಳಲ್ಲಿ ಹಣೆಗೆ ಕೆಂಪು ಹರಳು ಕೂರಿಸುವುದು, ಚಿನ್ನದ ಮೂಗುತಿ ತೊಡಿಸಿ ಅದರ ಅಂದವನ್ನು ಹೆಚ್ಚಿಸಿ ಸಂತೋಷಪಟ್ಟರು. ಈ ಹಿಂದೆಯೇ ಬೆಳ್ಳಿ ಮುಖವಾಡಗಳನ್ನು ಖರೀದಿಸಿಟ್ಟುಕೊಂಡವರು ಅವುಗಳನ್ನು ಅಕ್ಕಸಾಲಿಗರ ಬಳಿ ತಂದು ಪಾಲಿಶ್ ಮಾಡಿಸಿ ಲಕ್ಷ್ಮೀಯ ಸೊಬಗನ್ನು ಹೆಚ್ಚಿಸುತ್ತಿದ್ದರು.ಆಧುನಿಕತೆ ಹೆಚ್ಚಿದಂತೆ ಫ್ಯಾಷನ್ ಲಕ್ಷ್ಮೀಯರು ಮಾರುಕಟ್ಟೆಗೆ ಬಂದು ಕುಳಿತಿದ್ದಾರೆ. ಬೆಳ್ಳಿ ಲೇಪನದೊಂದಿಗೆ ಅದ್ಧೂರಿ ಅಲಂಕಾರದೊಂದಿಗೆ ಬಂದಿರುವ ಲಕ್ಷ್ಮಿಯರು ಮೋಡಿ ಮಾಡುತ್ತಿದ್ದಾರೆ. ಸರ್ವಾಲಂಕಾರಗೊಂಡಿರುವ ಈ ಲಕ್ಷ್ಮೀಯರನ್ನು ಕೊಂಡೊಯ್ದು ಪ್ರತಿಷ್ಠಾಪಿಸುವುದಷ್ಟೇ ಗೃಹಿಣಿಯರ ಕೆಲಸ. ಮಹಿಳೆಯರನ್ನು ಆಕರ್ಷಿಸುವ ರೀತಿಯಲ್ಲಿ ವೈವಿಧ್ಯಮಯವಾಗಿ ಲಕ್ಷ್ಮೀಯರಿಗೆ ಸೀರೆಯುಡಿಸಿ ಮಾರಾಟಕ್ಕೆ ಇಟ್ಟಿದ್ದಾರೆ.

7ಕೆಆರ್ ಎಂಎನ್ 3,4.ಜೆಪಿಜಿ3.ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಣ್ಣುಗಳ ಮಾರಾಟ ಜೋರಾಗಿತ್ತು.

4.ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವುಗಳನ್ನು ಕೊಳ್ಳುತ್ತಿರುವ ಜನರು.---------------------------------