ಸಾರಾಂಶ
ದೊಡ್ಡಬಳ್ಳಾಪುರ: ಕರ್ನಾಟಕ ಗೃಹ ಮಂಡಳಿಯು ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ, ಕಸಾಘಟ್ಟ ಗ್ರಾಮಗಳ 2,760 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ: ಕರ್ನಾಟಕ ಗೃಹ ಮಂಡಳಿಯು ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಐಯ್ಯನಹಳ್ಳಿ, ಕಸಾಘಟ್ಟ ಗ್ರಾಮಗಳ 2,760 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಯಲ್ಲಿ ಮಾತನಾಡಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಉಗ್ರಪ್ಪ ಮಾತನಾಡಿ, ಸರ್ಕಾರ ಕರ್ನಾಟಕ ಗೃಹ ಮಂಡಳಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿದೆ. ನಮ್ಮ ಭಾಗದಲ್ಲಿ ಇರುವುದೇ ಫಲವತ್ತಾದ ಭೂಮಿ. ಇದನ್ನೇ ನಂಬಿ ರೈತರು ಜೀವನ ನಡೆಸುತ್ತಿದ್ದಾರೆ. ಶೇ.90 ರಷ್ಟು ಮಂದಿ ಹೈನುಗಾರಿಕೆಯನ್ನ ಅವಲಂಬಿಸಿದ್ದಾರೆ. ಈಗಾಗಲೇ 5,700 ಎಕರೆ ಭೂಮಿಯನ್ನು ಕ್ವಿನ್ ಸಿಟಿಗಾಗಿ ವಶಪಡಿಸಿಕೊಂಡಿದೆ. ಈಗ 50:50 ಅನುಪಾತದಲ್ಲಿ ಕೆ.ಎಚ್.ಬಿ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ. ಇದಕ್ಕೆ ಐದು ಹಳ್ಳಿಗಳ ಜನರ ತೀವ್ರ ವಿರೋಧವಿದೆ. ಇದನ್ನು ಖಂಡಿಸಿ ಅ.28 ರಂದು ಬೃಹತ್ ಹೋರಾಟ ನಡೆಸಲಾಗುವುದು ಎಂದರು.ಪ್ರತಿಭಟನೆಗೆ ರೈತ, ಕನ್ನಡ, ದಲಿತಪರ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಪ್ರಾಂತರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಪ್ರಭಾ ಬೆಳವಂಗಲ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರ ಅತ್ಯಂತ ವೇಗವಾಗಿ ರೈತರ ಭೂಮಿಯನ್ನ ಕಸಿದುಕೊಳ್ಳುತ್ತಿದೆ. ಈಗಾಗಲೇ ಸರ್ಕಾರ ಹೆದ್ದಾರಿ, ಕೆಐಎಡಿಬಿ, ಫೆರಿಫೆರಲ್ ರಸ್ತೆ, ಏರೋಸ್ಪೇಸ್, ಕ್ವಿನ್ ಸಿಟಿ ಹೀಗೆ ಹಲವು ಹೆಸರುಗಳಲ್ಲಿ ಭೂಸ್ವಾಧೀನ ಮಾಡಿಕೊಂಡು ರೈತರನ್ನ ಒಕ್ಕಲೆಬ್ಬಿಸುತ್ತಿದೆ. ರೈತರಿಂದ ಭೂಮಿಯನ್ನು ಕಿತ್ತುಕೊಂಡರೆ ರೈತರ ಜೀವನ ಬೀದಿಗೆ ಬರಲಿದೆ. ಈ ಭಾಗದಲ್ಲಿ ರೈತರು ಸಲ್ಲಿಸಿದ್ದ ನಮೂನೆ 57 ಅರ್ಜಿಯನ್ನು ಸಾರಾಸಗಟಾಗಿ ವಜಾ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಅಕ್ಟೋಬರ್ 28ರಂದು ತಾಲ್ಲೂಕು ಮತ್ತು ಜಿಲ್ಲಾದ್ಯಂತ ಸರ್ಕಾರ ಮಾಡುತ್ತಿರುವ ಭೂಸ್ವಾಧೀನವನ್ನ ವಿರೋಧಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸಿ. ರಾಮಕೃಷ್ಣಯ್ಯ, ಅಧ್ಯಕ್ಷರಾದ ಉಗ್ರಪ್ಪ, ಕಾರ್ಯಾಧ್ಯಕ್ಷ ಸಿ.ಎಚ್. ರಾಮಕೃಷ್ಣಯ್ಯ, ಮುಖಂಡರಾದ ಸಂಜೀವನಾಯಕ್, ಚಂದ್ರತೇಜಸ್ವಿ, ರುದ್ರಾರಾಧ್ಯ, ಪ್ರಭಾ ಬೆಳವಂಗಲ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮುತ್ತೇಗೌಡ ಮುಂತಾದವರು ಉಪಸ್ಥಿತರಿದ್ದರು.
ಫೋಟೋ-20ಕೆಡಿಬಿಪಿ2- ಭೂಸ್ದಾಧೀನ ವಿಚಾರದಲ್ಲಿ ಸರ್ಕಾರದ ನಡೆ ಖಂಡಿಸಿ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ರೈತರು ಒಗ್ಗಟ್ಟು ಪ್ರದರ್ಶಿಸಿದರು.