ಸಾರಾಂಶ
ಸವಣೂರು: ರಾಷ್ಟ್ರೀಯ ನಾಯಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಿದ್ಧತೆ ಕೈಗೊಂಡಿದೆ, ಸರ್ವರೂ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಭರತರಾಜ್ ಕೆ.ಎನ್. ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಶುಕ್ರವಾರ ಡಾ. ಬಾಬು ಜಗಜೀವನರಾಂ ಅವರ 118ನೇ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಳೆದ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿತ್ತು. ಆದ್ದರಿಂದ ಸರಳವಾಗಿ ಜಯಂತಿ ಆಚರಿಸಲಾಗಿತ್ತು. ಈ ವರ್ಷ ತಾಲೂಕು ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಸಮುದಾಯದ ಮುಖಂಡರು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಮಾಜಿಕ ಕಾರ್ಯಗಳನ್ನು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಪೂರ್ಣಕುಂಭದೊಂದಿಗೆ ಡಾ. ಬಾಬು ಜಗಜೀವನರಾಂ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಯನ್ನು ಪಟ್ಟಣದ ರಾಜಬೀದಿಯಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾಭವನದಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗುವುದು. ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪೌರ ಕಾರ್ಮಿಕರಿಗೆ, ರಕ್ತದಾನಿಗಳಿಗೆ ಸನ್ಮಾನ ಮತ್ತಿತರ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಜೆ.ಕೆ. ಪಮ್ಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಾಗಪ್ಪ ತಿಪ್ಪಕ್ಕನವರ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಪ್ರಮುಖರಾದ ಲಕ್ಷ್ಮಣ ಕನವಳ್ಳಿ, ಪ್ರವೀಣ ಬಾಲೇಹೊಸೂರ, ಪರಮೇಶ ಮಲ್ಲಮ್ಮನವರ, ಉಮೇಶ ಮೈಲಮ್ಮನವರ, ಶ್ರೀಕಾಂತ ಲಕ್ಷ್ಮೇಶ್ವರ, ಗೋಪಾಲ ಮುಂಡಗೋಡ, ನಾಗರಾಜ ಹರಿಜನ, ಹಂಗಪ್ಪ ಹರಿಜನ, ರಾಜೂ ಮರಗಪ್ಪನವರ, ಸುರೇಶ ತಳವಾರ, ಅಜೇಯ ಪೂಜಾರ, ಬಸವರಾಜ ಮೈಲಮ್ಮನವರ, ಪ್ರಶಾಂತ ಮುಗಳಿ, ಮಂಜುನಾಥ ಮೆಳ್ಳಳ್ಳಿ ಪಾಲ್ಗೊಂಡಿದ್ದರು.5ರಂದು ರಕ್ತದಾನ ಶಿಬಿರ: ಏ. 5ರಂದು ರಕ್ತದಾನ ಶಿಬಿರದೊಂದಿಗೆ ಸಾಂಕೇತಿಕ ಜಯಂತಿ ಆಚರಣೆ. ಏ. 14ರಂದು ವಿವಿಧ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ ಆಯೋಜನೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪೂರ್ವಭಾವಿ ಸಭೆಗೆ ಗೈರುಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಾರಂಭದಲ್ಲಿ ಪಾಲ್ಗೊಳ್ಳದ ಅಧಿಕಾರಿಗಳ ಕಚೇರಿ ಎದುರಲ್ಲಿ ಹಲಗೆ ಬಾರಿಸಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.