"ಭವ್ಯ ಭಾರತ, ಅಶೋಕಚಕ್ರ ಹಾಗೂ 80ನೇ ಸ್ವಾತಂತ್ರ್ಯ " ಎಂಬ ಸಂದೇಶ ಮೂಡಿಸಿದ್ದಾರೆ. ಗೋದಿ, ಸಾಸಿವೆ ಕಾಳನ್ನು ಬಿತ್ತಿ ಅದನ್ನು ಅದಕ್ಕೆ ಅಶೋಕ ಚಕ್ರ ಮತ್ತು ಭಾರತ ಮಾತೆಯ ನಕಾಶೆಯ ಮಾದರಿಯಲ್ಲಿ ಬೆಳೆಸಿದ್ದು ಮನ ಸೆಳೆಯುವಂತಿದೆ.
ರಫೀಕ್ ಕಲೇಗಾರ
ಅಣ್ಣಿಗೇರಿ:ಪಟ್ಟಣದಲ್ಲಿ ಆ.15ರಂದು 80ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಟ್ಟಣದ ನಿಂಗಮ್ಮ ಎಸ್. ಹೂಗಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಧಾನ್ಯಗಳನ್ನು ಮೊಳಕೆ ಬರಿಸಿ, ಸಸಿಗಳ ಮೂಲಕ "ಭವ್ಯ ಭಾರತ, ಅಶೋಕಚಕ್ರ ಹಾಗೂ 80ನೇ ಸ್ವಾತಂತ್ರ್ಯ " ಎಂಬ ಸಂದೇಶ ಮೂಡಿಸಿದ್ದಾರೆ. ಗೋದಿ, ಸಾಸಿವೆ ಕಾಳನ್ನು ಬಿತ್ತಿ ಅದನ್ನು ಅದಕ್ಕೆ ಅಶೋಕ ಚಕ್ರ ಮತ್ತು ಭಾರತ ಮಾತೆಯ ನಕಾಶೆಯ ಮಾದರಿಯಲ್ಲಿ ಬೆಳೆಸಿದ್ದು ಮನ ಸೆಳೆಯುವಂತಿದೆ.ಇನ್ನು ಪಟ್ಟಣದ ಶ್ರೀಅಮೃತೇಶ್ವರ ಆಟೋ ಚಾಲಕರ ಸಂಘದ ಸದಸ್ಯರು ಸ್ವಯಂಪ್ರೇರಣೆಯಿಂದ ಬಸ್ ನಿಲ್ದಾಣದ ಆವರಣ ಸ್ವಚ್ಛಗೊಳಿಸಿ, ತೋರಣ, ಮಾವಿನ ತೊಳೆ ಹಾಗೂ ತೆಂಗಿನ ಗರಿಗಳಿಂದ ಶೃಂಗರಿಸಿದ್ದಾರೆ. ಮದುವಣಗಿತ್ತಿಯಂತೆ ಬಸ್ ನಿಲ್ದಾಣ ಅಲಂಕರಿಸಲಾಗಿದೆ. ಧ್ವಜಾರೋಹಣಕ್ಕೆ ಶಾಲಾ ಮಕ್ಕಳು ಹಾಗೂ ಊರಿನ ಮುಖಂಡರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ 1.5 ಕ್ವಿಂಟಲ್ ಪಲಾವ್ ಹಾಗೂ 50 ಕೆಜಿ ಶಿರಾ ಸಿದ್ಧಪಡಿಸಲಾಗುತ್ತಿದೆ.
ಆಟೋ ಚಾಲಕರ ಸಂಘದ ಅಧ್ಯಕ್ಷ ಚನ್ನಪ್ಪ ಬಣಗಾರ, ಸದಸ್ಯರಾದ ನಾಗಯ್ಯ ನವಲಗುಂದಮಠ, ಹನುಮಂತಪ್ಪ ಕೊಲ್ಲಣ್ಣವರ, ಮುತ್ತು ಬಿಸ್ಟಕ್ಕನವರ, ಮಂಜು ಹಡಪದ ಸೇರಿದಂತೆ ಹಲವರು ತಮ್ಮ ದಿನದ ಕೂಲಿ ಬಿಟ್ಟು ರಾಷ್ಟ್ರೀಯ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ.ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವವನ್ನು ಸ್ವಯಂಪ್ರೇರಣೆಯಿಂದ ಆಚರಿಸುತ್ತೇವೆ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು ನಮ್ಮ ಹೆಮ್ಮೆ ಮತ್ತು ಕರ್ತವ್ಯ.ಚನ್ನಪ್ಪ ಬಣಗಾರ, ಶ್ರೀ ಅಮೃತೇಶ್ವರ ಆಟೋ ಚಾಲಕರ ಸಂಘದ ಅಧ್ಯಕ್ಷ