844 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ

| Published : May 18 2025, 11:55 PM IST

ಸಾರಾಂಶ

ರಾಜ್ಯ ಸರ್ಕಾರ ಹೊಸಪೇಟೆಯಲ್ಲಿ ೨ವರ್ಷದ ಸಾಧನೆಯ ಕಾರ್ಯಕ್ರಮದ ಜತೆಗೆ ೧.೩ ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ

ಕನಕಗಿರಿ: ವಿವಿಧ ಯೋಜನೆಯಡಿ ತಾಲೂಕಿನ ೮೬೦ ಫಲಾನುಭವಿಗಳಿಗೆ ಮೇ.೨೦ರಂದು ಸಿಎಂ ಸಿದ್ದರಾಮಯ್ಯ ಹೊಸಪೇಟೆಯಲ್ಲಿ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶದಲ್ಲಿ ಹಕ್ಕುಪತ್ರ ವಿತರಿಸಲಿದ್ದಾರೆ.ಅದಕ್ಕಾಗಿ ಕಂದಾಯ ಇಲಾಖೆ ಸಕಲ ಸಿದ್ಧತೆಯಲ್ಲಿ ತೊಡಗಿದೆ.

ಹಲವು ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರವಿಲ್ಲದೇ ಜಮೀನಿನ ಪೋಡಿಯಾಗದೇ ೧ರಿಂದ ೫ ದರಖಾಸ್ತು ಪೋಡಿಯಿಲ್ಲದೇ ಸ್ವಾಮಿತ್ವವಿಲ್ಲದ ೮೬೦ ಅರ್ಜಿದಾರರು ಹಲವು ವರ್ಷಗಳಿಂದ ದಾಖಲೆಗಾಗಿ ಕಾಯುತ್ತಿದ್ದರು. ಅದಕ್ಕಾಗಿ ರಾಜ್ಯ ಸರ್ಕಾರ ಹೊಸಪೇಟೆಯಲ್ಲಿ ೨ವರ್ಷದ ಸಾಧನೆಯ ಕಾರ್ಯಕ್ರಮದ ಜತೆಗೆ ೧.೩ ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನ ೮೬೦ ಫಲಾನುಭವಿಗಳನ್ನು ಹೊಸಪೇಟೆಯ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಬಿಸಿಲು,ನೆರಳೆನ್ನದೇ ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.

ಕಂದಾಯ ಗ್ರಾಮಗಳಾದ ಅಡವಿಬಾವಿ ಚಿಕ್ಕತಾಂಡಾ, ದೊಡ್ಡತಾಂಡಾದ ೪೦೨ ಫಲಾನುಭವಿಗಳು, ತಾಲೂಕಿನ ವರನಖೇಡ, ಗೋಡಿನಾಳ, ಕನಕಾಪುರ, ಬಸರಿಹಾಳ, ಬೈಲಕ್ಕುಂಪುರ ಗ್ರಾಮಗಳು ಪೋಡಿ ಮುಕ್ತಗೊಂಡಿದ್ದು, ೧೧೩ ಫಲಾನುಭವಿಗಳು, ೧ರಿಂದ ೫(ದರ್ಖಾಸ್ತು ಪೋಡಿ)ಕ್ಕೆ ತಾಲೂಕಿನ ೨೫ ಗ್ರಾಮಗಳು ಆಯ್ಕೆಯಾಗಿದ್ದು, ೧೮೭ ಫಲಾನುಭವಿಗಳು ಹಾಗೂ ಗಾಂವಠಾಣಾದಡಿ ಸ್ವಾಮಿತ್ವದಡಿಯಲ್ಲಿ ಗುಡುದೂರು, ಕೆ.ಮಲ್ಲಾಪುರದ ೧೫೮ ಫಲಾನುಭವಿಗಳಿಗೆ ಮುಖ್ಯಮಂತ್ರಿ ಸಿದ್ದು ಹಕ್ಕುಪತ್ರ ವಿತರಿಸಲಿದ್ದಾರೆ.

೩೫ ಬಸ್‌ಗಳ ಸಿದ್ಧತೆ:೮೬೦ ಫಲಾನುಭವಿಗಳ ಜತೆಗೆ ಒಬ್ಬೊಬ್ಬರನ್ನು ಕರೆ ತರುವಂತೆ ಆದೇಶವಿರುವುದರಿಂದ ೧೭೨೦ಜನರನ್ನು ಹೊಸಪೇಟೆಗೆ ಕರೆದೊಯ್ಯಬೇಕಿದ್ದು, ಒಟ್ಟು ೩೫ ಬಸ್ಸುಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ೧೫ ಸರ್ಕಾರಿ ಹಾಗೂ ೨೦ಖಾಸಗಿ ಶಾಲಾ ಬಸ್ಸುಗಳು ತಾಲೂಕಿನಿಂದ ಫಲಾನುಭವಿಗಳನ್ನು ಕರೆದೊಯ್ಯಲಿವೆ. ೭೦ ಮೇಲ್ವಿಚಾರಕರು, ೬ ಜನ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ನಿರಂತರ ಸಭೆ: ಈಗಾಗಲೇ ಸಚಿವರು ಪಕ್ಷದ ಕಾರ್ಯಕ್ರಮವಾಗಿ ನಾನಾ ಕಡೆಗಳಲ್ಲಿ ಸಭೆ ಮಾಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದರೆ, ಇತ್ತ ತಾಲೂಕಾಡಳಿತ ಮೇಲಾಧಿಕಾರಿಗಳು ಆಗಾಗ್ಗೆ ಹೊರಡಿಸುವ ಆದೇಶ ಸಿದ್ಧತೆಗಳನ್ನು ನಿಯೋಜನೆಗೊಂಡ ಸಿಬ್ಬಂದಿಯೊಂದಿಗೆ, ಸಭೆ ನಡೆಸುತ್ತಿದ್ದು, ಫಲಾನುಭವಿಗಳನ್ನು ಕರೆದೊಯ್ಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕನಕಗಿರಿ ತಾಲೂಕಿನಲ್ಲಿ ನಾಲ್ಕು ಯೋಜನೆಯಡಿ ೮೪೪ ಫಲಾನುಭವಿಗಳಿದ್ದು, ಅವರನ್ನು ಭೇಟಿ ಮಾಡಿ ಅವರಿದ್ದ ಸ್ಥಳದಿಂದಲೇ ಬಸ್ಸುಗಳಲ್ಲಿ ಹೊಸಪೇಟೆಯ ಕಾರ್ಯಕ್ರಮಕ್ಕೆ ಕರೆದೊಯ್ದು ಹಕ್ಕುಪತ್ರ ವಿತರಿಸಲಾಗುವುದು. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.