ಪೂರಿಗಾಲಿ ಹನಿ-ತುಂತುರು ನೀರಾವರಿ ಯೋಜನೆ ಜಾರಿಗೆ ಸಿದ್ಧತೆ

| Published : Mar 16 2025, 01:50 AM IST

ಸಾರಾಂಶ

ಮಳವಳ್ಳಿ ತಾಲೂಕಿನ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆ ಜಾರಿಗೆ ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದ್ದು ರೈತರನ್ನು ಸಾಮೂಹಿಕ ಕೃಷಿಯಲ್ಲಿ ತೊಡಗಿಸಲು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕಿನ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆ ಜಾರಿಗೆ ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದ್ದು ರೈತರನ್ನು ಸಾಮೂಹಿಕ ಕೃಷಿಯಲ್ಲಿ ತೊಡಗಿಸಲು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಯೋಜನೆಯಡಿ ೨೫,೩೨೭ ಎಕರೆಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ಪೈಪ್ ಅಳವಡಿಕೆ ಕಾರ್ಯವನ್ನೂ ಮುಕ್ತಾಯಗೊಳಿಸಲಾಗಿದೆ. ಒಂದು ಸಾವಿರ ಎಕರೆಗೆ ಒಂದು ಸಂಘಗಳನ್ನು ರಚಿಸಲಾಗಿದ್ದು, ಸಂಘದ ಸದಸ್ಯರೆಲ್ಲರಿಗೂ ಸಾಮೂಹಿಕ ಕೃಷಿಯ ಮಹತ್ವ, ಏಕಬೆಳೆಯಿಂದ ದೊರಕಬಹುದಾದ ಲಾಭ, ಬೆಳೆದ ಬೆಳೆಗಳಿಗೆ ಸಿಗುವ ಮಾರುಕಟ್ಟೆ, ರೈತರಿಗೆ ಸಿಗುವ ಆರ್ಥಿಕ ಸದೃಢತೆ ಇವೆಲ್ಲಾ ಅಂಶಗಳನ್ನು ಅವರೆದುರು ತೆರೆದಿಡುವ ಪ್ರಯತ್ನದಲ್ಲಿ ಮುಂದುವರೆದಿದ್ದಾರೆ.

ಹನಿ ಮತ್ತು ತುಂತುರು ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವುದಕ್ಕೆ ರೈತರು ಇನ್ನೂ ಒಮ್ಮತದಿಂದ ಮುಂದೆ ಬರುತ್ತಿಲ್ಲ. ಕೆಲವರು ಯೋಜನೆಯನ್ನು ಅರ್ಥೈಸಿಕೊಂಡು ಮುಂದೆ ಬಂದಿದ್ದರೆ, ಕೆಲವರು ಯೋಜನೆ ಯಾವ ರೀತಿ ಕಾರ್ಯಗತಗೊಳ್ಳಲಿದೆ ಎನ್ನುವುದನ್ನು ಕಾದುನೋಡುತ್ತಿದ್ದಾರೆ. ಇನ್ನೂ ಕೆಲವರು ಯೋಜನೆಗೆ ಅಳವಡಿಸಲಾಗಿರುವ ಪೈಪ್‌ಗಳಲ್ಲಿ ಮೊದಲು ನೀರು ಬರಲಿ. ಎಷ್ಟು ಪ್ರಮಾಣದಲ್ಲಿ ನೀರು ಸಿಗಬಹುದೆಂಬುದನ್ನು ನೋಡೋಣ ಎಂದುಕೊಂಡಿದ್ದರೆ, ಮತ್ತೆ ಹಲವರು ಒಂದು ಬೆಳೆಯನ್ನು ಬೆಳೆದು ತೋರಿಸಲಿ. ಅದರಿಂದ ಸಿಗುವ ಲಾಭ-ನಷ್ಟವನ್ನು ನೋಡಿ ಆನಂತರ ಮುಂದುವರೆಯಲು ನಿರ್ಧರಿಸಿದಂತೆ ಕಂಡುಬರುತ್ತಿದ್ದಾರೆ.

ಹೊಸ ಬಗೆಯ ಕೃಷಿ ವಿಧಾನ, ಹೊಸತನದಿಂದ ಕೂಡಿದ ವ್ಯವಸ್ಥೆಯನ್ನು ಪೂರಿಗಾಲಿ ಭಾಗದ ರೈತರು ಅರ್ಥೈಸಿಕೊಳ್ಳಲಾಗದೆ ಗೊಂದಲದಲ್ಲಿ ಮುಳುಗಿದ್ದಾರೆ. ಕ್ಷೇತ್ರದವರೇ ಆಗಿ ರೈತರ ನಾಡಿಮಿಡಿತ ಅರಿತಿರುವ ಪಿ.ಎಂ.ನರೇಂದ್ರಸ್ವಾಮಿ ಅವರು ಏಕಾಏಕಿ ಯೋಜನೆಯನ್ನು ಜಾರಿಗೊಳಿಸುವ ಪ್ರಯತ್ನಕ್ಕೆ ಮುಂದಾಗದೆ ಮೊದಲಿಗೆ ಯೋಜನೆಯ ಜಾರಿ ಕುರಿತಂತೆ ಸಂಪೂರ್ಣವಾಗಿ ರೈತರಿಗೆ ಅರ್ಥೈಸಿಕೊಟ್ಟು ಅವರೆಲ್ಲರನ್ನೂ ಒಮ್ಮತದಿಂದ ಸಾಮೂಹಿಕ ಕೃಷಿಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ಬರಡು ಭೂಮಿಯಲ್ಲಿ ಕೃಷಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ೬೦೦ ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು ಜಾರಿಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಮಾದರಿಯ ಯೋಜನೆ ವೈಫಲ್ಯ ಕಂಡಂತೆ ದಕ್ಷಿಣದಲ್ಲಿ ವೈಫಲ್ಯತೆ ಕಾಣಬಾರದು. ಹತ್ತು ತಿಂಗಳು ನಿರಂತರವಾಗಿ ೨೬ ಎಕರೆ ಪ್ರದೇಶಕ್ಕೆ ನೀರುಣಿಸುವ ಮೂಲಕ ಸಾಮೂಹಿಕ ಕೃಷಿಯೊಂದಿಗೆ ಹೊಸ ಕೃಷಿ ಪದ್ಧತಿಯತ್ತ ರೈತರನ್ನು ಮುನ್ನಡೆಸುವ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ ರೈತ ಸಮುದಾಯದಿಂದ ಸಿಗುವ ಬೆಂಬಲವನ್ನು ಎದುರುನೋಡುತ್ತಿದ್ದಾರೆ.

ಇದಕ್ಕಾಗಿ ಕೃಷಿ ವಿಜ್ಞಾನಿಗಳು, ತಜ್ಞರು, ಅಧಿಕಾರಿಗಳೆಲ್ಲರನ್ನೂ ಜಾಗೃತಿ ಕಾರ್ಯಕ್ರಮಕ್ಕೆ ಕರೆದೊಯ್ದು ಅವರಿಂದಲೂ ರೈತರಿಗೆ ತಿಳಿವಳಿಕೆ ಮೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ರೈತರು ಒಮ್ಮನಸ್ಸಿನಿಂದ ಒಗ್ಗಟ್ಟಾಗಿ ಬಂದು ಸಾಮೂಹಿಕ ಕೃಷಿಯಲ್ಲಿ ತೊಡಗಿದರೆ ಬದುಕನ್ನು ಹೇಗೆ ಸದೃಢಗೊಳಿಸಿಕೊಳ್ಳಬಹುದು. ಕೃಷಿಯನ್ನು ಹೇಗೆ ಲಾಭದಾಯಕ ಮಾಡಿಕೊಳ್ಳಬಹುದು, ಕಡಿಮೆ ನೀರಿನಲ್ಲಿ ಬೇಡಿಕೆಯುಕ್ತ ಬೆಳೆಗಳನ್ನು ಬೆಳೆದು ಸ್ಥಿತಿವಂತರಾಗಬಹುದು ಎಂಬುದನ್ನೆಲ್ಲಾ ಬಿಡಿಸಿ ಹೇಳುವುದರೊಂದಿಗೆ ಒಗ್ಗಟ್ಟಿನ ಕೃಷಿಯತ್ತ ಸೆಳೆಯುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಈ ಯೋಜನೆಯಿಂದ ಮಳವಳ್ಳಿ ತಾಲೂಕಿನ ಒಟ್ಟು ೫೧ ಗ್ರಾಮಗಳ ಜಮೀನಿಗೆ ನೀರಾವರಿ ಸಲಭ್ಯ ದೊರಕುವುದರೊಂದಿಗೆ ೧೬ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ. ಮಳವಳ್ಳಿ ತಾಲೂಕಿನ ಜಗಲಿಮೋಳೆ ಬಳಿ ಜಾಕ್‌ವೆಲ್ ಅಳವಡಿಸಲಾಗಿದ್ದು ಒಟ್ಟು ೧.೯೬೭ ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ.