ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖಾ ಸಚಿವ ಮಧುಬಂಗಾರಪ್ಪ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಗೆಳೆಯರ ಬಳಗ ಹಾಗೂ ಜಿಲ್ಲಾ ಕಾಂಗ್ರೆಸ್ ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖಾ ಸಚಿವ ಮಧುಬಂಗಾರಪ್ಪ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಗೆಳೆಯರ ಬಳಗ ಹಾಗೂ ಜಿಲ್ಲಾ ಕಾಂಗ್ರೆಸ್ ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಮಧುಬಂಗಾರಪ್ಪನವರ ಜನ್ಮದಿನಾಚರಣೆ ಮಾ.2ರಂದು ಇದ್ದು, ಆ ದಿನ ಬೆಳಗ್ಗೆ 8 ಗಂಟೆಗೆ ಅವರ ಹುಟ್ಟೂರಾದ ಕುಬಟೂರು ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ನಂತರ ೧೦.೩೦ಕ್ಕೆ ಸೊರಬದ ಬಂಗಾರಧಾಮಕ್ಕೆ ಭೇಟಿನೀಡುವರು. ಅಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳೊಡನೆ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ತಾಲೂಕಿನ ಬುದ್ಧಿಮಾಂಧ್ಯ ಮಕ್ಕಳಿಗೆ ಸಿಹಿಹಂಚುವರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಸೊರಬ ಸರ್ಕಾರಿ ಆಸ್ಪತ್ರೆಯ ಬಡರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಣೆ ಮಾಡುವರು. ಅಲ್ಲದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಅಲ್ಲದೆ ಸೊರಬ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಗುವುದು ಎಂದರು.

ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ: ಅಂದು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಅಭಿಮಾನಿಗಳ ಬಳಗದಿಂದ ಆಯೋಜಿಸಿರುವ ಜನ್ಮದಿನದಲ್ಲಿ ಮಧು ಬಂಗಾರಪ್ಪ ಅವರು ಪಾಲ್ಗೊಳ್ಳುವರು. ಜನ್ಮದಿನ ಅಂಗವಾಗಿ ಮಹಾನಗರ ಪಾಲಿಕೆಯ ಸುಮಾರು 400 ಪೌರ ಕಾರ್ಮಿಕರಿಗೆ ವಿಶೇಷ ಉಡುಗೊರೆಯನ್ನು ನೀಡಲಾಗುವುದು. ಅಲ್ಲದೆ ಅಂಬೇಡ್ಕರ್ ಭವನದಲ್ಲಿಯೇ ಬೆಳಗ್ಗೆಯಿಂದಲೇ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಹಿಂದುಳಿದ ವಿಭಾಗದ ವತಿಯಿಂದ ಜಿಲ್ಲೆಯ ಎಲ್ಲಾ ಬ್ಲಾಕ್‌ಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ್ಣು ಮತ್ತು ಬ್ರೆಡ್ ವಿತರಣೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.

ವಿಮಾನಯಾನ: ಮಧು ಬಂಗಾರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಸೊರಬದ ಪೌರಕಾರ್ಮಿಕರಿಗೆ ಹಾಗೂ ಎಸ್ಸೆಸ್ಸೆಲ್ಸಿ ಉತ್ತಮ ಅಂಕ ಗಳಿಸಿದ ಮಕ್ಕಳಿಗಾಗಿ ವಿಮಾನಯಾನವನ್ನು ಆಯೋಜಿಸಲಾಗಿದೆ. ಪೌರ ಕಾರ್ಮಿಕರು ಮಾ.1 ರಂದು ರಾತ್ರಿ ಟ್ರೈನ್‌ನಲ್ಲಿ ಬೆಂಗಳೂರಿಗೆ ತೆರಳುವರು. ಅಲ್ಲಿ ಮಧುಬಂಗಾರಪ್ಪನವರ ಜನ್ಮದಿನವನ್ನು ಆಚರಿಸಿ ನಂತರ ಮಾ.2 ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಮರಳುವರು. ಇದೇ ದಿನ ಮಧ್ಯಾಹ್ನ 3ಕ್ಕೆ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಮಕ್ಕಳು ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಿ, ಅಲ್ಲಿ ಮಧುಬಂಗಾರಪ್ಪನವರ ಜನ್ಮದಿನದಲ್ಲಿ ಪಾಲ್ಗೊಳ್ಳುವರು. ಮಕ್ಕಳ ಜೊತೆಗೆ ಸಚಿವ ಮಧುಬಂಗಾರಪ್ಪ ಕೂಡ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

ಒಟ್ಟಾರೆ ಮಧುಬಂಗಾರಪ್ಪನವರ ಜನ್ಮದಿನವನ್ನು ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಅವರ ಗೆಳೆಯರ ಬಳಗ ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಟಿ. ಹಾಲಪ್ಪ, ಜಿ.ಡಿ.ಮಂಜುನಾಥ್, ರಮೇಶ್ ಶಂಕರಘಟ್ಟ, ಕಲಗೋಡು ರತ್ನಾಕರ್, ಯು. ಶಿವಾನಂದ, ಶ್ವೇತಾಬಂಡಿ, ಶಿವಣ್ಣ, ವಿಜಯಕುಮಾರ್ ಮುಂತಾದವರು ಇದ್ದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳಿಂದ ಜನ್ಮದಿನಾಚರಣೆ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೆಪಿಸಿಸಿಯ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷರು ಹಾಗೂ ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪನವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕು ಮುಖ್ಯ ಕೇಂದ್ರಗಳಲ್ಲಿ ಇರುವ ಆಸ್ಪತ್ರೆಗಳಲ್ಲಿ ಹಣ್ಣು ಮತ್ತು ಬ್ರೆಡ್ ವಿತರಣೆ, ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಇನ್ನಿತರ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ತಿಳಿಸಿದರು.